ನವದೆಹಲಿ : ಸಂಭಾಲ್ ಶಾಹಿ ಜಾಮಾ ಮಸಿದಿಯ ಮೇಲಿನ ಜಿಲ್ಲಾ ಟ್ರಯಲ್ ಕೋರ್ಟ್ ವಿಚಾರಣೆಯನ್ನು ಜನವರಿ 8 ರವರೆಗೆ ಸುಪ್ರೀಂಕೋರ್ಟ್ ಇಂದು ತಡೆಹಿಡಿದಿದೆ. ಈ ವಿಚಾರದಲ್ಲಿ ಹೈಕೋರ್ಟ್ ಅನುಮತಿ ಇಲ್ಲದೆ ಸದ್ಯಕ್ಕೆ ಕೆಳ ನ್ಯಾಯಾಲಯ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ.
ಸುಪ್ರೀಂಕೋರ್ಟ್ ಈ ವಿಷಯವನ್ನು ತನ್ನ ಮುಂದೆ ಬಾಕಿ ಇರಿಸಿದ್ದು, 2025 ಜನವರಿ 6 ರಿಂದ ಪ್ರಾರಂಭವಾಗುವ ವಾರದಲ್ಲಿ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ. ಅಲ್ಲದೆ ವಿಚಾರಣೆ ಸಂದರ್ಭದಲ್ಲಿ ಸಂಭಾಲ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಸಂಭಾಲ್ ಮಸೀದಿಯ ಶಾಹಿ ಈದ್ದಾ ಸಮಿತಿಯು ಹೈಕೋರ್ಟ್ ಅನ್ನು ಸಂಪರ್ಕಿಸುವವರೆಗೆ ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಡ್ವಕೇಟ್ ಕಮಿಷನರ್ ಅವರ ಸಮೀಕ್ಷಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡುವಂತೆ ಸೂಚಿಸಿದೆ.
ಇದೇ ವೇಳೆ ಶಾಹಿ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೂ ಮುನ್ನ ಪೊಲೀಸರು ನಡೆಸಿದ ಧ್ವಜ ಮೆರವಣಿಗೆಯಲ್ಲಿ ಸಂಭಾಲ್ ಡಿಎಂ ಡಾ.ರಾಜೇಂದ್ರ ಪೆನ್ಸಿಯಾ ಭಾಗವಹಿಸಿದ್ದರು. ಪರಿಸ್ಥಿತಿ ಶಾಂತಿಯುತವಾಗಿದೆ, ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ.