ಶಬರಿಮಲೆ: ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಮೇಲೆ ನಿಂತು ಪೊಲೀಸರು ಫೋಟೋಶೂಟ್ ಮಾಡಿಸಿರುವುದು ಇದೀಗ ತೀವ್ರ ವಿವಾದಕ್ಕೀಡಾಗಿದೆ. ಈ ಘಟನೆ ಕುರಿತು ಕೇರಳದ ಎಡಿಜಿಪಿ, ದೇವಸ್ಥಾನದ ವಿಶೇಷ ಅಧಿಕಾರಿ ಬಳಿ ವರದಿ ಕೇಳಿದ್ದು, ದೇವಸ್ಥಾನದಲ್ಲಿ ತಮ್ಮ ಕರ್ತವ್ಯದ ನಂತರ ಮೊದಲ ಬ್ಯಾಚ್‌ನ ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದ್ದರು.
ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಭಕ್ತರಿಂದ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ವಿವಾದ ಭುಗಿಲೆದ್ದಿದೆ. ಸರ್ಕಾರಕ್ಕೆ ಭಕ್ತರ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಯ ಬಳಿ ವರದಿ ಕೇಳಿದೆ. ಪೊಲೀಸರ ಫೋಟೋಶೂಟ್ ವಿರುದ್ಧ ವಿಶ್ವ ಹಿಂದು ಪರಿಷತ್ ಹರಿಹಾಯ್ದಿದೆ. ಹದಿನೆಂಟು ಮೆಟ್ಟಿಲನ್ನು ಅಯ್ಯಪ್ಪ ಭಕ್ತರು ಆಶೀರ್ವಾದ ಎಂದು ಪರಿಗಣಿಸುತ್ತಾರೆ. ಒಂದೊಂದು ಮೆಟ್ಟಿಲಿಗೂ ಒಂದೊಂದು ಅರ್ಥವಿದೆ. 18 ಮೆಟ್ಟಿಲನ್ನು ಇಳಿಯುವಾಗಲೂ ಭಕ್ತರು ದೇವರಿಗೆ ಬೆನ್ನು ತೋರುವುದಿಲ್ಲ. ಪತಿತಂಪಾಡಿ ವಿಧಿವಿಧಾನದಲ್ಲಿರುವಾಗಲೂ ಅಯ್ಯಪ್ಪನಿಗೆ ಬೆನ್ನು ತೋರಿಸಿ ಅಯ್ಯಪ್ಪ ಭಕ್ತರು ಫೋಟೋಶೂಟ್ ಮಾಡುವಂತಿಲ್ಲ. ಹೀಗಿರುವಾಗ ಪೊಲೀಸರು ಈ ರೀತಿ ಮಾಡಬಹುದೇ ಎಂದು ವಿಶ್ವ ಹಿಂದು ಪರಿಷತ್ ಕೇರಳ ಘಟಕ ಪ್ರಶ್ನಿಸಿದೆ.
ವಿಶ್ವ ಹಿಂದು ಪರಿಷತ್ ರಾಜ್ಯಾಧ್ಯಕ್ಷ ವಿ.ಜಿ.ತಂಪಿ, ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್ ಮಾತನಾಡಿ, ಪೊಲೀಸ್ ಅಧಿಕಾರಿಗಳಿಗೆ ಬೆಂಬಲ ನೀಡಿದ ಮುಖ್ಯಮಂತ್ರಿಗಳೇ ಮೊದಲ ಆರೋಪಿಯಾಗಿದ್ದಾರೆ ಎಂದು ಕಿಡಿಕಾರಿದರು. ಈ ಘಟನೆ ಕುರಿತು ವರದಿ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಕೇರಳದ ಎಡಿಜಿಪಿ ಸೂಚನೆ ನೀಡಿದ್ದಾರೆ.