ಶಿಮ್ಲಾ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅದ್ಭುತ ಗೆಲುವಿನ ಬಗ್ಗೆ ಆ ಪಕ್ಷದ ಸಂಸದೆ ಕಂಗನಾ ರಣಾವತ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮಹಾವಿಕಾಸ್ ಅಘಾಡಿ ಮೈತ್ರಿಕೂಟವನ್ನು ಕಟುವಾಗಿ ಟೀಕಿಸಿದ್ದಾರೆ.
ಮಹಿಳೆಯರನ್ನು ಅವಮಾನಿಸುವ ರಾಕ್ಷಸರನ್ನು ಈ ಚುನಾವಣೆಯಲ್ಲಿ ಸೋಲಿಸಲಾಗಿದೆ. ಕೆಲವು ಮೂರ್ಖರು ಒಟ್ಟಾಗಿ ಸೇರಿದ ಮಾತ್ರಕ್ಕೆ ದೇಶ ಇಬ್ಭಾಗವಾಗುವುದಿಲ್ಲ ಎಂದು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಅವರ ಶೀವಸೇನೆ ಮೈತ್ರಿ ಜರಿದರು. ಮಹಿಳೆಯರನ್ನು ಅವಮಾನಿಸುವವರು ರಾಕ್ಷಸರಿಗೆ ಸಮ. ಹೆಣ್ಣನ್ನು ಕೀಳಾಗಿ ಕಂಡವರು ಚುನಾವಣೆಯಲ್ಲಿ ಇದರ ಪರಿಣಾಮ ಅನುಭವಿಸಬೇಕಾಯಿತು ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಬಗ್ಗೆ ಮಾತನಾಡಿರುವ ಕಂಗನಾ, ಅವರು ತಮ್ಮ ಸರಿ - ತಪ್ಪುಗಳನ್ನು ಗುರುತಿಸುವುದನ್ನು ಮರೆತಿದ್ದಾರೆ. ನಾನು ಅವರ ಸೋಲನ್ನು ಮೊದಲೇ ಊಹಿಸಿದ್ದೆ. ನಾವು ರಾಕ್ಷಸ ಮತ್ತು ದೈವ ಹೇಗೆ ಗುರುತಿಸುತ್ತೇವೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮಹಿಳೆಯರನ್ನು ಅವಮಾನಿಸುವವರು ಶಿಕ್ಷೆ ಅನುಭವಿಸಲೇಬೇಕು ಎಂದರು.
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಗೆಲುವಿಗೆ ಕಂಗನಾ ರಣಾವತ್ ಅವರು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ನಮ್ಮ ಪಕ್ಷಕ್ಕೆ ಐತಿಹಾಸಿಕ ಗೆಲುವು ಎಂದು ಹೇಳಿದ್ದಾರೆ. ರಾಜ್ಯದ ಜನತೆಗೆ ನಾವು ಆಭಾರಿಯಾಗಿದ್ದೇವೆ. ಹೊಸ ಮುಖ್ಯಮಂತ್ರಿಯನ್ನು ಪಕ್ಷದ ನಾಯಕರು ಆಯ್ಕೆ ಮಾಡಲಿದ್ದಾರೆ ಎಂದರು.