ಕಾಶ್ಮೀರ: ಕಣಿವೆಯ ಬಹುತೇಕ ಬಯಲು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಇನ್ನು ಕೆಲವೆಡೆ ಹಗುರದಿಂದ ಸಾಧಾರಣ ಹಿಮಪಾತವಾಗುತ್ತಿದೆ. ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಮತ್ತು ಗುಲ್ಮಾರ್ಗ್ ಮತ್ತು ಗುರೇಜ್ ಕಣಿವೆಯಲ್ಲಿ ಇಂದು ಬೆಳಗ್ಗೆ ಹಿಮಪಾತವಾಗಿದೆ. ಗುಲ್ಮಾರ್ಗ್‌ನಲ್ಲಿ ಲಘು ಹಿಮಪಾತ ದಾಖಲಾಗಿದ್ದರೆ, ಗುರೇಜ್ ಕಣಿವೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ದಾಖಲಾಗಿದೆ. ಆದರೆ, ಮಧ್ಯಾಹ್ನದ ನಂತರ ಹವಾಮಾನದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಗುಲ್ಮಾರ್ಗ್‌ನಲ್ಲಿ ಶನಿವಾರ ಬೆಳಗ್ಗೆ ಒಂದು ಇಂಚು ಹಿಮಪಾತ ದಾಖಲಾಗಿದೆ. ಹಿಮಪಾತದಿಂದಾಗಿ ಬಂಡಿಪೋರಾ ಗುರೇಜ್ ರಸ್ತೆ ಸಂಚಾರವನ್ನು ಸದ್ಯಕ್ಕೆ ಮುಚ್ಚಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಧ್ಯಾಹ್ನದಿಂದ ಹವಾಮಾನ ಸುಧಾರಿಸಿದೆ. ನವೆಂಬರ್ 17ರಿಂದ 23ರವರೆಗೆ ಸಾಮಾನ್ಯವಾಗಿ ಶುಷ್ಕ ವಾತಾವರಣದಿಂದ ಕೂಡಿರುವ ಸಾಧ್ಯತೆ ಇರುತ್ತದೆ. ನವೆಂಬರ್ 24 ರಂದು ಕೆಲವು ಸ್ಥಳಗಳಲ್ಲಿ ಸ್ವಲ್ಪ ಮಳೆ ಮತ್ತು ಹಿಮಪಾತ ಕೂಡ ನಿರೀಕ್ಷಿಸಲಾಗಿದೆ. ಪ್ರವಾಸಿಗರು, ಚಾರಣಿಗರು ಮತ್ತು ಪ್ರಯಾಣಿಕರು ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಮುಂದುವರೆಸುವಂತೆ ಹವಾಮಾನ ಇಲಾಖೆಯ ಉಪನಿರ್ದೇಶಕ ಡಾ. ಮುಖ್ತಾರ್ ಅಹ್ಮದ್ ಸಲಹೆ ನೀಡಿದ್ದಾರೆ.
ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಕೆಲವು ಭಾಗಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ವ್ಯಾಪಕ ಹಿಮಪಾತವಾಗುತ್ತಿದೆ. ಹಿಮದ ತೆಳುವಾದ ಪದರವು ಮನೆಗಳ ಮೇಲ್ಛಾವಣಿ, ಕಾರು, ಮೈದಾನ, ಹುಲ್ಲು ಪ್ರದೇಶ, ಮರ-ಗಿಡ, ಹೂವು-ಬಳ್ಳಿಗಳ ಮೇಲೆ ಬೀಳುತ್ತಿರುವುದರಿಂದ ಪ್ರಕೃತಿಯ ತನ್ನ ಸೊಬಗನ್ನ ಹೆಚ್ಚಿಸಿದೆ. ಕಣಿವೆ ರಾಜ್ಯದ ಕೆಲವು ಭಾಗಗಳಲ್ಲಿ ಎಡಬಿಡದೇ ಮಂಜು ಸುರಿತುತ್ತಿರುವ ಕಾರಣ ನಗರದ ಬೀದಿಗಳು ಕೂಡ ಹಿಮದಿಂದ ಆವೃತವಾಗಿವೆ.