ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ. ಚಂದ್ರಚೂಡ್ ಅವರು ಶುಕ್ರವಾರ ಸುಪ್ರೀಂಕೋರ್ಟ್‌ಗೆ ಭಾವನಾತ್ಮಕ ವಿದಾಯ ಹೇಳಿದರು. ನ. 9, 2022 ರಂದು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, ತಮ್ಮ 2 ವರ್ಷಗಳ ಅವಧಿ ಮುಗಿದ ನಂತರ ತಮ್ಮ ಸ್ಥಾನಕ್ಕೆ ವಿದಾಯ ಹೇಳಿದರು.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿದ್ದ ಚಂದ್ರಚೂಡ್ ಅವರು ಕೆಲವು ಘಟನಾವಳಿಗಳನ್ನು ಸ್ಮರಿಸುತ್ತಾ, ''ತಮ್ಮ ಭುಜಗಳು ಟೀಕೆಗಳನ್ನು ಸ್ವೀಕರಿಸುವಷ್ಟು ವಿಶಾಲವಾಗಿವೆ. ತಮ್ಮನ್ನು ಟ್ರೋಲ್ ಮಾಡಿದವರೆಲ್ಲರೂ ಶೀಘ್ರದಲ್ಲೇ ನಿರುದ್ಯೋಗಿಗಳಾಗುತ್ತಾರೆ'' ಎಂದು ಟೀಕಿಸಿದರು.
''ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ. ಹಾಗೆಯೇ ನನ್ನ ವೈಯಕ್ತಿಕ ಜೀವನವನ್ನು ಸಾರ್ವಜನಿಕ ಜ್ಞಾನಕ್ಕೆ ನಾನು ಅನೇಕ ರೀತಿಯಲ್ಲಿ ತೆರೆದಿಟ್ಟಿದ್ದೇನೆ. ನಿಮ್ಮ ಸ್ವಂತ ಜೀವನವನ್ನು ನೀವು ಸಾರ್ವಜನಿಕ ಜ್ಞಾನಕ್ಕೆ ತೆರೆದಿಟ್ಟಾಗ ಹಲವು ರೀತಿಯಲ್ಲಿ ಟೀಕೆಗೆ ಗುರಿಯಾಗುತ್ತೀರಿ. ವಿಶೇಷವಾಗಿ ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ. ಬಹುಶಃ ಹೆಚ್ಚು ಟ್ರೋಲ್ ಮಾಡಲ್ಪಟ್ಟ ನ್ಯಾಯಾಧೀಶ ನಾನಾಗಿರಬಹು. ನಾನು ಎದುರಿಸಿದ ಎಲ್ಲಾ ಟೀಕೆಗಳನ್ನು ಸ್ವೀಕರಿಸುವಷ್ಟು ನನ್ನ ಭುಜಗಳು ವಿಶಾಲವಾಗಿವೆ'' ಎಂದು ಅವರು ಹೇಳಿದರು.
ತಮ್ಮ ನ್ಯಾಯಾಂಗ ಪ್ರಯಾಣದ ವೈಯಕ್ತಿಕ ಘಟನೆಗಳನ್ನು ಹಂಚಿಕೊಂಡ ಅವರು, ''ಇನ್ನು ನನಗೆ ನ್ಯಾಯ ನೀಡಲು ಸಾಧ್ಯವಾಗುವುದಿಲ್ಲ. ಆದರೆ, ನಿವೃತ್ತಿಯಿಂದ ನಾನು ತೃಪ್ತಿ ಹೊಂದಿದ್ದೇನೆ. ನ್ಯಾಯಾಂಗ ಸುಧಾರಣೆ ಪಾರದರ್ಶಕತೆ ಮತ್ತು ನ್ಯಾಯಕ್ಕೆ ಅಚಲವಾದ ಬದ್ಧತೆಯೊಂದಿಗೆ ಸಂಯೋಜಿಸಿದ್ದೇನೆ'' ಎಂದು ತಮ್ಮ ಅಧಿಕಾರಾವಧಿ ಬಗ್ಗೆ ತಿಳಿಸಿದರು.