ಮಹಾರಾಷ್ಟ್ರ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಅಥವಾ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಮರಾಠಾ ಕೋಟಾ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಸೋಮವಾರ ಹೇಳಿದ್ದಾರೆ. ತಮ್ಮ ಹಿಂದಿನ ನಿಲುವನ್ನು ಬದಲಾಯಿಸಿಕೊಂಡಿರುವ ಪಾಟೀಲ್ ಯೂ ಟರ್ನ್ ಹೊಡೆದಿದ್ದಾರೆ. ಅಲ್ಲದೆ ನಾಮಪತ್ರಗಳನ್ನು ವಾಪಸ್ ಪಡೆಯುವಂತೆ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಸೋಮವಾರ (ಇಂದು) ಕೊನೆಯ ದಿನ. ಚುನಾವಣೆ ನವೆಂಬರ್ 20ರಂದು ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.
ಸರಣಿ ಸಭೆಗಳನ್ನು ನಡೆಸಿದ ನಂತರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಜಾರಂಗೆ ಪಾಟೀಲ್ ನಿರ್ಧರಿಸಿದ್ದಾರೆ. ಇದು ಅವರ ಹಿಂದಿನ ನಿಲುವುಗಳಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಈ ಮುನ್ನ ಅವರು ಕೆಲ ಕ್ಷೇತ್ರಗಳಲ್ಲಿ ಕೆಲ ಅಭ್ಯರ್ಥಿಗಳನ್ನು ಬೆಂಬಲಿಸಲು ಅಥವಾ ವಿರೋಧಿಸಲು ನಿರ್ಧರಿಸಿದ್ದರು.
ಸೋಮವಾರ ಬೆಳಿಗ್ಗೆ ಇಲ್ಲಿನ ಅಂತರ್ ವಾಲಿ ಸರಾಟಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, "ಬಹಳಷ್ಟು ಚರ್ಚೆಯ ನಂತರ ರಾಜ್ಯದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದೇನೆ. ಯಾರನ್ನು ಸೋಲಿಸಬೇಕು ಮತ್ತು ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಮರಾಠಾ ಸಮುದಾಯ ತಾನೇ ನಿರ್ಧರಿಸುತ್ತದೆ. ನನಗೆ ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ಯಾರನ್ನೂ ಬೆಂಬಲಿಸುವುದಿಲ್ಲ." ಎಂದರು.
ಈ ವಿಷಯದಲ್ಲಿ ಆಡಳಿತಾರೂಢ ಮಹಾಯುತಿ ಅಥವಾ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಯಿಂದ ತನಗೆ ಯಾವುದೇ ಒತ್ತಡವಿಲ್ಲ ಎಂದು ಅವರು ಪ್ರತಿಪಾದಿಸಿದರು.