ಅಮೆರಿಕ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಉಂಟಾಗಿದೆ. ಈ ಸಂದರ್ಭದಲ್ಲಿ ಅಮೆರಿಕ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ - ಇಸ್ರೇಲ್‌ಗೆ ಹೆಚ್ಚಿನ ಮಿಲಿಟರಿ ಉಪಕರಣಗಳನ್ನು ರವಾನಿಸುವ ಘೋಷಣೆ ಮಾಡಿದೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಇಸ್ರೇಲ್ ಹಮಾಸ್, ಹಿಜ್ಬುಲ್ಲಾ ಉಗ್ರರ ಮೇಲೆ ಮುಗಿ ಬೀಳುತ್ತಿದೆ. ಇದು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಗಂಭೀರ ಕಳವಳವನ್ನು ಉಂಟುಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಇರಾನ್ ಗೆ ಎಚ್ಚರಿಕೆ ನೀಡಿದೆ. ಇದೇ ವೇಳೆ ಅಮೆರಿಕ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಪಶ್ಚಿಮ ಏಷ್ಯಾಕ್ಕೆ ಹೆಚ್ಚಿನ ಸೇನಾ ಉಪಕರಣಗಳನ್ನು ಸ್ಥಳಾಂತರಿಸುತ್ತಿದ್ದೇವೆ ಎಂದು ಅಮೆರಿಕ ಘೋಷಿಸಿದೆ. ಪೆಂಟಗನ್‌ನ ವಕ್ತಾರ ಮೇಜರ್ ಜನರಲ್ ಪ್ಯಾಟ್ ರೈಡರ್ ಈ ವಿಷಯ ದೃಢಪಡಿಸಿದ್ದಾರೆ.
ಇರಾನ್ ಮತ್ತು ಅದರ ಬೆಂಬಲಿಗರು ಅಮೆರಿಕದ ನಾಗರಿಕರು ಮತ್ತು ಸಿಬ್ಬಂದಿ ಗುರಿಯಾಗಿಸಿಕೊಂಡು ದಾಳಿ ನಡೆಸಿದರೆ, ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ಯಾಟ್ ರೈಡರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ ತಿಂಗಳು ಹೊಸ ಶಸ್ತ್ರಾಸ್ತ್ರಗಳನ್ನು ಸ್ಥಳಾಂತರಿಸಲಾಗುವುದು ಎಂದು ತಿಳಿದುಬಂದಿದೆ.
ದೀರ್ಘ-ಶ್ರೇಣಿಯ B-52 ಬಾಂಬರ್ ವಿಮಾನಗಳು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ವಿಧ್ವಂಸಕಗಳನ್ನು ಮಧ್ಯಪ್ರಾಚ್ಯಕ್ಕೆ ರವಾನಿಸಲಾಗಿದೆ ಎಂದು ಯುಎಸ್ ಬಹಿರಂಗಪಡಿಸಿದೆ. ಇರಾನ್‌ಗೆ ಎಚ್ಚರಿಕೆಯಾಗಿ ಈ ಉಪಕರಣವನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಇದೇ ವೇಳೆ ಅಮೆರಿಕ ಸ್ಪಷ್ಟಪಡಿಸಿದೆ. ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಬ್ಯಾಟರಿ - ಥಾಡ್ ಜೊತೆಗೆ ಇಸ್ರೇಲ್‌ಗೆ ಮಿಲಿಟರಿ ಪಡೆಗಳನ್ನು ಕಳುಹಿಸುವುದಾಗಿ ಪೆಂಟಗನ್ ಇತ್ತೀಚೆಗೆ ಘೋಷಿಸಿದೆ ಎಂದು ತಿಳಿದು ಬಂದಿದೆ. ಅಮೆರಿಕದ ಈ ಘೋಷಣೆ ಬೆನ್ನಲ್ಲೇ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಸಿದ್ಧತೆ ನಡೆಸಿರುವುದು ಗಮನಾರ್ಹ.