ನವದೆಹಲಿ: ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಸ್ಪರ್ಧೆಯಿಂದ ಹಿಂದೆ ಸರಿದಿದೆ. ಬದಲಿಗೆ I.N.D.I.A ಕೂಟಕ್ಕೆ ಬೆಂಬಲ ಘೋಷಿಸಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧದ ಮತಗಳನ್ನು ಸೆಳೆಯಲು ಪ್ಲಾನ್ ಮಾಡಿದೆ.
ಇದರ ಭಾಗವಾಗಿ, ಇಂಡಿಯಾ ಕೂಟದ ಮೈತ್ರಿ ಪಕ್ಷಗಳ ಪರವಾಗಿ ಪ್ರಚಾರ ಮಾಡಲು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮುಂದಾಗಿದ್ದಾರೆ. ವಿಶೇಷವೆಂದರೆ, ಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ ಅಭ್ಯರ್ಥಿಗಳ ಪರ ಅವರು ಪ್ರಚಾರ ಮಾಡಲ್ಲ ಎಂದು ಪಕ್ಷ ತಿಳಿಸಿದೆ.
ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್ ಪವಾರ್ ಬಣ) ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಅಭ್ಯರ್ಥಿಗಳು ಸೇರಿದಂತೆ ಎಎಪಿಯ ಎಲ್ಲಾ ಮೈತ್ರಿ ಪಾಲುದಾರ ಪಕ್ಷಗಳ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಬೆಂಬಲಿಸಲಿದೆ. ಅವರ ಪರವಾಗಿ ಪ್ರಚಾರ ಕೂಡ ನಡೆಸಲಾಗುವುದು. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪರ ಕೇಜ್ರಿವಾಲ್ ಅವರು ಪ್ರಚಾರ ಮಾಡುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್) ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ ಭಾಗಿಯಾಗುವಂತೆ ಅರವಿಂದ್ ಕೇಜ್ರಿವಾಲ್ ಅವರನ್ನು ಕೋರಿವೆ. ಹೀಗಾಗಿ ಮಾಜಿ ಸಿಎಂ ಆ ಪಕ್ಷಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಅದೇ ರೀತಿ, ಜಾರ್ಖಂಡ್‌ನಲ್ಲಿ ಜೆಎಂಎಂ ಅಭ್ಯರ್ಥಿಗಳ ಪರವೂ ಮತಬೇಟೆ ನಡೆಸಲಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣ ಆರೋಪದ ಮೇಲೆ ಕೇಜ್ರಿವಾಲ್ ಅವರು ಜೈಲಿನಲ್ಲಿದ್ದಾಗ ಜಾರ್ಖಂಡ್ ಸಿಎಂ ಹೇಮಂತ್ ಸೋರೆನ್ ಅವರೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದರು. ಈ ವೇಳೆ ಇಬ್ಬರೂ ನಾಯಕರ ಮಧ್ಯೆ ನಿಕಟ ಸಂಬಂಧ ಬೆಳೆಯಿತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಎಎಪಿ ಸಂಚಾಲಕರು ಸೋರೆನ್ ಅವರ ಪತ್ನಿ ಕಲ್ಪನಾ ಅವರೊಂದಿಗೆ ಜಂಟಿ ರ್ಯಾಲಿಯಲ್ಲಿ ಭಾಗವಹಿಸಿದ್ದರು.