ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ತಾಯ್ನಾಡಿಗೆ ಗಡೀಪಾರು ಮಾಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ಇದು ಎರಡು ರಾಷ್ಟ್ರಗಳ ನಡುವಿನ ಸಾಮಾನ್ಯ ಪ್ರಕ್ರಿಯೆ, ಅಕ್ರಮ ವಲಸೆಯನ್ನು ತಡೆಯುವ ವಿಧಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರವಷ್ಟೇ ಅಮೆರಿಕನ್ ಅಧಿಕಾರಿಗಳು ದೇಶದಲ್ಲಿ ಅಕ್ರಮವಾಗಿ ತಂಗಿರುವ ಭಾರತೀಯ ಪ್ರಜೆಗಳ ಗಡೀಪಾರಿಗೆ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದರು. ಎರಡೂ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯವಿದ್ದರೂ, ಭಾರತೀಯರ ಗಡೀಪಾರು ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ, ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಎರಡೂ ರಾಷ್ಟ್ರಗಳು ಸಹಕಾರದ ಭಾಗವಾಗಿ ಅಕ್ರಮ ವಲಸೆಯನ್ನು ತಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಅಕ್ಟೋಬರ್ 22 ರಂದು ಅಮೆರಿಕನ್ ವಲಸೆ ಮತ್ತು ಕಸ್ಟಮ್ಸ್ ಎನ್ಫೋರ್ಸ್ಮೆಂಟ್ (ICE) ಮೂಲಕ ಅಮೆರಿಕನ್ ಡಿಪಾರ್ಟ್ಮೆಂಟ್ ಆಫ್ ಹೋಮ್ಲ್ಯಾಂಡ್ ಸೆಕ್ಯುರಿಟಿ (DHS) ಪ್ರಕಾರ, ಅಮೆರಿಕದಲ್ಲಿ ಉಳಿದುಕೊಳ್ಳಲು ಅಗತ್ಯ ನಿಯಮಗಳನ್ನು ಪಾಲಿಸದ ವಲಸಿಗರನ್ನು ದೇಶದಿಂಧ ಹೊರಕಳುಹಿಸಲಾಗುವುದು ಎಂದಿದೆ.
ಚಾರ್ಟರ್ಡ್ ವಿಮಾನದ ಮೂಲಕ ಭಾರತೀಯ ಪ್ರಜೆಗಳ ಇತ್ತೀಚಿನ ಗಡೀಪಾರು ಸಹಕಾರದ ಭಾಗವಾಗಿದೆ. ಇಂತಹ ಗಡೀಪಾರುಗಳು ಹಲವಾರು ವರ್ಷಗಳಿಂದ ನಡೆಯುತ್ತಿವೆ. 2024 ರ ಆರ್ಥಿಕ ವರ್ಷದಲ್ಲಿ ಅಮೆರಿಕದ ಅಕ್ರಮ ವಲಸೆ ತಡೆ ಸಂಸ್ಥೆಗಳು 1,60,000ಕ್ಕೂ ಹೆಚ್ಚು ವ್ಯಕ್ತಿಗಳನ್ನು ದೇಶದಿಂದ ಹಿಂದಿರುಗಿಸಿವೆ. ಭಾರತ ಸೇರಿದಂತೆ 145 ಕ್ಕೂ ಹೆಚ್ಚು ದೇಶಗಳಿಗೆ 495 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಾಪಸಾತಿ ವಿಮಾನಗಳನ್ನು ರವಾನಿಸಿದೆ.