ದುಬೈ: ಅಕ್ಟೋಬರ್ 1 ರಂದು ಇಸ್ರೇಲ್ ಮೇಲೆ ಇರಾನ್ ಮಾಡಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಗೆ ಪ್ರತೀಕಾರವಾಗಿ ಇರಾನ್‌ನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಶನಿವಾರ ಮುಂಜಾನೆ ವೈಮಾನಿಕ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್‌ನಲ್ಲಿ ಈ ದಾಳಿಯಿಂದ ಯಾವುದೇ ಹಾನಿ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇಸ್ರೇಲ್‌ನ ಸೇನೆಯು ದಾಳಿಯ ಬಗ್ಗೆ ವಿವರಣೆ ನೀಡಿದೆ. ಇರಾನ್‌ನಲ್ಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ತಿಳಿಸಿದೆ,.
ಇರಾನ್‌ನಲ್ಲಿನ ಆಡಳಿತ ಮತ್ತು ಅದರ ಪ್ರಾಕ್ಸಿಗಳು ಅಕ್ಟೋಬರ್ 7 ರಿಂದ ಇಸ್ರೇಲ್ ಮೇಲೆ ಪಟ್ಟುಬಿಡದೆ ದಾಳಿ ಮಾಡುತ್ತಿವೆ. ಏಳು ರಂಗಗಳಲ್ಲಿ - ಇರಾನ್ ನೆಲದಿಂದ ನೇರ ದಾಳಿ ಸೇರಿದಂತೆ ಹಲವು ಬಾರಿ ಇಸ್ರೇಲ್ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲ್ ಮಿಲಟರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವದ ಇತರ ಸಾರ್ವಭೌಮ ರಾಷ್ಟ್ರಗಳಂತೆ, ಇಸ್ರೇಲ್ ರಾಜ್ಯವು ತನ್ನ ರಕ್ಷಣೆಯ ಸಾರ್ವಭೌಮತೆ ಹೊಂದಿದ್ದು, ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಧ್ಯಪ್ರಾಚ್ಯ ಪ್ರವಾಸದ ನಂತರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅಮೆರಿಕಕ್ಕೆ ಹಿಂತಿರುಗುತ್ತಿದ್ದಂತೆಯೇ ಈ ದಾಳಿ ನಡೆದಿದೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಸೀನ್ ಸಾವೆಟ್ ಹೇಳಿಕೆ ನೀಡಿದ್ದು "ಇರಾನ್‌ನಲ್ಲಿನ ಮಿಲಿಟರಿ ನೆಲೆಗಳ ಮೇಲೆ ಇಸ್ರೇಲ್ ಉದ್ದೇಶಿತ ದಾಳಿಗಳನ್ನು ನಡೆಸುತ್ತಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.