ಬೆಂಗಳೂರು: ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅನುಮತಿ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರ ಸಕಾರತ್ಮಕವಾಗಿ ಸ್ಪಂದಿಸಿದ್ದು ತನ್ನ ಸಮ್ಮತಿ ನೀಡಿದೆ. ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್, "ಕೇಂದ್ರ ಸರಕಾರವು ಶೇಂಗಾವನ್ನು ಬೆಂಬಲ ಬೆಲೆಗೆ ಖರೀದಿಸಲು ಒಪ್ಪಿಗೆ ನೀಡಿದೆ. ಹಾಗೂ ಪ್ರತಿ ಕ್ವಿಂಟಾಲ್ಗೆ 6,783 ರೂ. ದರವನ್ನು ನಿಗದಿಪಡಿಸಲಾಗಿದೆ" ಎಂದು ಹೇಳಿದ್ದಾರೆ.
"ಬೆಂಬಲ ಬೆಲೆಯ ಮಾರ್ಗಸೂಚಿ ಅನ್ವಯ ಕೊಪ್ಪಳ, ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಗದಗ ಮತ್ತು ಬಾಗಲಕೋಟೆ, ದಾವಣಗೆರೆ, ರಾಯಚೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ರೈತರಿಂದ ಶೇಂಗಾ ಖರೀದಿಗೆ ಅನುಮತಿ ದೊರೆತಿದೆ" ಎಂದು ಸಚಿವರು ತಿಳಿಸಿದ್ದಾರೆ.
"ಈಗ ಅನುಮತಿ ದೊರೆತಿರುವ ಶೇಂಗಾ ಸೇರಿದಂತೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಟ್ಟು ಎಂಟು ಕೃಷಿ ಉತ್ಪನ್ನಗಳನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲಾಗಿದೆ. ಇದುವರೆಗೆ ಉಂಡೆ ಕೊಬ್ಬರಿ, ಮಿಲ್ಲಿಂಗ್ ಕೊಬ್ಬರಿ, ಹೆಸರುಕಾಳು, ಉದ್ದಿನಕಾಳು, ಸೋಯಾಬಿನ್, ಸೂರ್ಯಕಾಂತಿ, ಹತ್ತಿಯನ್ನು ಖರೀದಿಸಲಾಗಿದೆ. ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಲು ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ರಾಜ್ಯದ ಮನವಿಯನ್ನು ಕೇಂದ್ರ ಸರಕಾರ ಪುರಸ್ಕರಿಸಿದೆ" ಎಂದು ಸಚಿವರು ತಿಳಿಸಿದ್ದಾರೆ.