ಚಂಡೀಗಢ: ಕೇಂದ್ರ ಮತ್ತು ಪಂಜಾಬ್ ಸರ್ಕಾರ ಭತ್ತ ಖರೀದಿ ಪ್ರಕ್ರಿಯೆ ವಿಳಂಬಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಉಂಟಾಗಿದೆ ಎಂದು ಆರೋಪಿಸಿ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆ ಹೆದ್ದಾರಿ ಪ್ರತಿಭಟನೆ ನಡೆಸುತ್ತಿದೆ.
ಇಂದು ನಾಲ್ಕು ಗಂಟೆಗಳ ಕಾಲ ಚಂಡೀಗಢ - ದೆಹಲಿ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ಆರಂಭಿಸಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ. ಅಂಬಲಾ - ಚಂಡೀಗಢ ಹೆದ್ದಾರಿಯನ್ನು 11ರಿಂದ ಮಧ್ಯಾಹ್ನ 3ರವರೆಗೆ ಬಂದ್ ಮಾಡಲಾಗುವುದು ಎಂದು ರೈತ ಸಂಘಟನೆಗಳು ಮೊದಲೇ ತಿಳಿಸಿವೆ.
ಹೆದ್ದಾರಿ ಬಂದ್ನಿಂದ ಸವಾರರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಸವಾರರಿಗೆ ಪರ್ಯಾಯ ಮಾರ್ಗವಾಗಿ ಬರ್ವಾಲ, ಅಂಬಲಾ ಕಡೆ ಸಾಗಬಹುದು ಎಂದು ಡಿಎಸ್ಪಿ ಬಿಕ್ರಮಜಿತ್ ಸಿಂಗ್ ಬ್ರರ್ ತಿಳಿಸಿದ್ದಾರೆ.
ಪಂಜಾಬ್‌ನ ಮಾರುಕಟ್ಟೆಗಳಿಗೆ 38.41 ಲಕ್ಷ ಮೆಟ್ರಿಕ್ ಟನ್ ಭತ್ತ ಆಗಮಿಸಿದ್ದು, ಪ್ರತಿದಿನ 4.88 ಲಕ್ಷ ಮೆಟ್ರಿಕ್ ಟನ್ ಬರುತ್ತಿದೆ ಎಂದು ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಲಾಲ್ ಚಂದ್ ಕತರುಚಕ್ ಹೇಳಿದ್ದಾರೆ.