ಕೆನಡಾ : ಖಲಿಸ್ತಾನಿ ಉಗ್ರ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತ ಮತ್ತು ಕೆನಡಾ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೋ ವಿರುದ್ಧ ಅವರದ್ದೇ ಪಕ್ಷದ ಸಂಸದರು ಬಂಡಾಯವೆದ್ದಿದ್ದಾರೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹಿಸಿರುವ ಅವರು ಗಡುವು ಕೂಡ ನೀಡಿದ್ದಾರೆ.
ಕೆನಡಾ ಮತ್ತು ಭಾರತ ದೇಶಗಳು ಪರಸ್ಪರ ರಾಯಭಾರಿಗಳನ್ನು ವಜಾ ಮಾಡಿ ತಮ್ಮ ದೇಶಗಳಿಗೆ ಕರೆಸಿಕೊಂಡಿವೆ. ಇದರಿಂದ ಉಭಯ ರಾಷ್ಟ್ರಗಳ ನಡುವೆ ತೀವ್ರ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಜಸ್ಟಿನ್ ಟ್ರುಡೋ ಆರೋಪಿಸಿದ್ದಾರೆ. ಇದಕ್ಕೆ ಸೂಕ್ತ ಸಾಕ್ಷ್ಯ ನೀಡುವಂತೆ ಭಾರತ ಹೇಳಿದೆ.
ಲಿಬರಲ್ ಪಕ್ಷದ ಗೌಪ್ಯ ಸಭೆ: ಈ ಮಧ್ಯೆ, ಜಸ್ಟಿನ್ ಟ್ರುಡೋ ಅವರು ಪ್ರತಿನಿಧಿಸುವ ಲಿಬರಲ್ ಪಕ್ಷವು ಬುಧವಾರ ರಹಸ್ಯ ಸಭೆ ನಡೆಸಿದೆ. ಅದರಲ್ಲಿ ಟ್ರುಡೋ ವಿರುದ್ಧ 24 ಮಂದಿ ಸಂಸದರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದಾಗಿ ಕೆನಡಾ ಮಾಧ್ಯಮಗಳು ವರದಿ ಮಾಡಿವೆ.
ಪಕ್ಷವು ಈಗಾಗಲೇ ಆಡಳಿತ ವಿರೋಧಿ ಕಾರಣಕ್ಕಾಗಿ ಸಂಖ್ಯಾಬಲ ಕಳೆದುಕೊಳ್ಳುತ್ತಿದೆ. ಪ್ರಧಾನಿ ಟ್ರುಡೋ ಅವರ ನಿಲುವುಗಳಿಂದಾಗಿ ಜನರು ಅಸಮಾಧಾನಗೊಂಡಿದ್ದಾರೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಹುದ್ದೆಗೆ ಅವರು ರಾಜೀನಾಮೆ ನೀಡಬೇಕು ಎಂದು ಸಭೆಯಲ್ಲಿ ಸಂಸದರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.