image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಭಾರೀ ಮಳೆ, ಒಡಿಶಾಗೆ 'ರೆಡ್‌ ಅಲರ್ಟ್‌'

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರ್ನಾಟಕ ಸೇರಿ 14 ರಾಜ್ಯಗಳಲ್ಲಿ ಭಾರೀ ಮಳೆ, ಒಡಿಶಾಗೆ 'ರೆಡ್‌ ಅಲರ್ಟ್‌'

ನವದೆಹಲಿ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದೇಶದ ಸುಮಾರು 14 ರಾಜ್ಯಗಳಲ್ಲಿ ಮಳೆಯ ಅಬ್ಬರ ತೀವ್ರಗೊಂಡಿದೆ. ಕರ್ನಾಟಕದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಗಂಟೆಗೆ 30 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ರಾಜ್ಯದ ಉತ್ತರ ಒಳನಾಡಿನ ಧಾರವಾಡ, ಬೆಳಗಾವಿ, ಹಾವೇರಿ, ಕೊಪ್ಪಳ, ವಿಜಯಪುರ, ಬೀದರ್‌ ಮತ್ತು ಮಲೆನಾಡು ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇತ್ತ ನೆರೆಯ ತಮಿಳುನಾಡಿನಲ್ಲೂ ಧಾರಾಕಾರ ಮಳೆಯಾಗುವ ಸಾಧ್ಯತೆಯಿದ್ದು, ದೆಹಲಿಯಲ್ಲಿ ಹಗುರ ಮಳೆಯಾಗಬಹುದು.

ಇದೇ ವೇಳೆ, ಬಂಗಾಳಕೊಲ್ಲಿಯ ವಾಯುವ್ಯ ಹಾಗೂ ಪಕ್ಕದ ಪಶ್ಚಿಮ ಬಂಗಾಳ-ಉತ್ತರ ಒಡಿಶಾ ಕರಾವಳಿಯಲ್ಲಿ ಹೊಸ ಕಡಿಮೆ ಒತ್ತಡದ ಪ್ರದೇಶ ರಚನೆಯಾಗುತ್ತಿರುವುದರಿಂದ ಒಡಿಶಾದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಒಡಿಶಾದ ಹಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಐಎಂಡಿ ‘ರೆಡ್ ಅಲರ್ಟ್’ ಘೋಷಿಸಿದೆ. ಈಗಾಗಲೇ ಪ್ರವಾಹ ಎದುರಿಸುತ್ತಿರುವ ಪ್ರದೇಶಗಳಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಹೊಸ ವಾಯುಭಾರ ಕುಸಿತ ವ್ಯವಸ್ಥೆಯು ಮುಂದಿನ 24 ಗಂಟೆಗಳಲ್ಲಿ ವಾಯುವ್ಯ ದಿಕ್ಕಿಗೆ ಚಲಿಸಿ ಮತ್ತಷ್ಟು ಪ್ರಬಲಗೊಳ್ಳಲಿದೆ. ಇದರ ಪ್ರಭಾವದಿಂದ ಕರಾವಳಿ ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ನಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 16 ರಿಂದ 18 ರವರೆಗೆ ಪಶ್ಚಿಮ ಬಂಗಾಳ, ಬಾಂಗ್ಲಾದೇಶ, ಒಡಿಶಾ ಮತ್ತು ಉತ್ತರ ಆಂಧ್ರಪ್ರದೇಶದ ಕರಾವಳಿ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಖಡಕ್ ಮುನ್ನೆಚ್ಚರಿಕೆ ನೀಡಿದೆ.

Category
ಕರಾವಳಿ ತರಂಗಿಣಿ