image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಲ್ಪಸಂಖ್ಯಾತರ ಕುರಿತು ಸಿಎಂ ರೇವಂತ್ ರೆಡ್ಡಿ ಹೇಳಿಕೆ: ತೀವ್ರ ರಾಜಕೀಯ ಚರ್ಚೆ

ಅಲ್ಪಸಂಖ್ಯಾತರ ಕುರಿತು ಸಿಎಂ ರೇವಂತ್ ರೆಡ್ಡಿ ಹೇಳಿಕೆ: ತೀವ್ರ ರಾಜಕೀಯ ಚರ್ಚೆ

ಹೈದರಾಬಾದ್‌ : ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ಆದಿವಾಸಿ ಭವನದಲ್ಲಿ ನಡೆದ ಅಲ್ಪಸಂಖ್ಯಾತರ ಶ್ರೇಷ್ಠತಾ ಸಮಾವೇಶದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಕುಶಲ ಕಾರ್ಮಿಕರಾಗಿದ್ದು, ಅವರಿಗೆ ಅವಕಾಶ ನೀಡಿದರೆ ರಫೇಲ್ ಯುದ್ಧ ವಿಮಾನವನ್ನೇ ಬಿಡಿಭಾಗಗಳಾಗಿ ಕಳಚಿ ಮತ್ತೆ ಜೋಡಿಸಬಲ್ಲ ತಾಂತ್ರಿಕ ಕುಶಲತೆ ಹೊಂದಿದ್ದಾರೆ; ಆದರೆ ಅವರು ಪುಸ್ತಕದ ಪಾಠಗಳನ್ನು ನೆನಪಿಟ್ಟುಕೊಳ್ಳಲು ಹೆಣಗಾಡುತ್ತಾರೆ ಎಂದು ಹೇಳುವ ಮೂಲಕ ಸಿಎಂ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ತಮ್ಮ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಸಮರ್ಥಿಸಿಕೊಂಡ ಸಿಎಂ ರೇವಂತ್ ರೆಡ್ಡಿ, ಶಾದಿ ಮುಬಾರಕ್, ಕಲ್ಯಾಣ ಲಕ್ಷ್ಮಿ, ಇಂದಿರಮ್ಮ ಇಂಡ್ಲು, ಮಹಾಲಕ್ಷ್ಮಿ ಉಚಿತ ಬಸ್ ಪ್ರಯಾಣ ಹಾಗೂ ರೈತು ಭರೋಸಾ ಯೋಜನೆಗಳನ್ನು ಎತ್ತಿಹಿಡಿದರು. ಹೈದರಾಬಾದ್‌ನ ಹಳೆಯ ನಗರದಲ್ಲಿ ವಿದ್ಯುತ್ ಕಳವು ಮತ್ತು ಬಿಲ್ ಪಾವತಿಸುವುದಿಲ್ಲ ಎಂಬ ಟೀಕೆಗಳಿಗೆ ಉತ್ತರಿಸಿದ ಅವರು, ತಿಂಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ 'ಗೃಹ ಜ್ಯೋತಿ' ಯೋಜನೆಯು ಅಲ್ಪಸಂಖ್ಯಾತ ಸಹೋದರ ಸಹೋದರಿಯರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು. ತಮಗೆ ಹಿಂದೂ ಮತ್ತು ಮುಸ್ಲಿಮರು ಎರಡು ಕಣ್ಣುಗಳಿದ್ದಂತೆ ಎಂದ ಅವರು, ಮಾಜಿ ಸಿಎಂ ವೈ.ಎಸ್. ರಾಜಶೇಖರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದ್ದ ಶೇ. 4ರಷ್ಟು ಮೀಸಲಾತಿಯನ್ನು ಸ್ಮರಿಸಿದರು.

ಇನ್ನೊಂದೆಡೆ, ಮುಖ್ಯಮಂತ್ರಿಯವರ ಹೇಳಿಕೆಯನ್ನು ತೆಲಂಗಾಣ ಬಿಜೆಪಿ ಕಾರ್ಯದರ್ಶಿ ವೀರೇಂದರ್ ಗೌಡ್ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಓಲೈಕೆ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ವಿದ್ಯುತ್ ಬಿಲ್ ಪಾವತಿಸದ ಪ್ರದೇಶಗಳಿಗೆ ಉಚಿತ ವಿದ್ಯುತ್ ನೀಡುವುದು ಅಸಂವಿಧಾನಿಕ ಎಂದಿದ್ದಾರೆ. ಬಾಕಿ ವಸೂಲಿ ಮಾಡಲು ಸಾಧ್ಯವಾಗದ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ಹೇಗೆ ಕಾಪಾಡುತ್ತದೆ ಎಂದು ಪ್ರಶ್ನಿಸಿದ ಬಿಜೆಪಿ ನಾಯಕರು, ನಿರ್ದಿಷ್ಟ ಸಮುದಾಯಕ್ಕೆ ಆದ್ಯತೆ ನೀಡುವ ಬದಲು ತಾರತಮ್ಯವಿಲ್ಲದೆ ಕಾನೂನು ಬದ್ಧ ಆಡಳಿತ ನಡೆಸುವಂತೆ ಮುಖ್ಯಮಂತ್ರಿಗೆ ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ