ಮುಂಬೈ: 2025-26ನೇ ಹಣಕಾಸು ವರ್ಷದಲ್ಲಿ ಹೊಸ ಕಂಪನಿಗಳ ನೋಂದಣಿಯಲ್ಲಿ ಮಹಾರಾಷ್ಟ್ರವು ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿರುವ ಅವರು, 2025-26ನೇ ಸಾಲಿನಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 41,525 ಹೊಸ ಕಂಪನಿಗಳು ನೋಂದಣಿಯಾಗಿವೆ. ಉತ್ತರ ಪ್ರದೇಶ (27,494) ಮತ್ತು ದೆಹಲಿ (20,272) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿದ್ದರೆ, ಕರ್ನಾಟಕದಲ್ಲಿ 17,857 ಕಂಪನಿಗಳು ನೋಂದಣಿಯಾಗುವ ಮೂಲಕ 4ನೇ ಸ್ಥಾನದಲ್ಲಿದೆ.
ಕಳೆದ 5 ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ 36,211 ಖಾಸಗಿ ಕಂಪನಿಗಳನ್ನು ಮುಚ್ಚಲಾಗಿದೆ ಎಂಬ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಅವರು, ಮುಚ್ಚಲ್ಪಟ್ಟ ಕಂಪನಿಗಳಲ್ಲಿ ಶೇ. 76 ರಷ್ಟು ಸಂಸ್ಥೆಗಳು ಎಂದಿಗೂ ಕಾರ್ಯಾಚರಣೆ ಆರಂಭಿಸದ ಅಥವಾ ಸಕ್ರಿಯವಾಗಿರದ (Defunct) ಕಂಪನಿಗಳಾಗಿದ್ದವು. ಇನ್ನು ಶೇ. 12 ರಷ್ಟು ಕಂಪನಿಗಳು ಇತರ ಸಂಸ್ಥೆಗಳೊಂದಿಗೆ ವಿಲೀನಗೊಂಡಿದ್ದರೆ, ಶೇ. 2 ರಷ್ಟು ಕಂಪನಿಗಳು ನಿಯಮಾನುಸಾರ ಮುಚ್ಚಲ್ಪಟ್ಟಿವೆ. ರಾಜ್ಯದಲ್ಲಿ ಕಂಪನಿಗಳು ಮುಚ್ಚಲ್ಪಟ್ಟರೂ ಪ್ರಸ್ತುತ 3.96 ಲಕ್ಷಕ್ಕೂ ಹೆಚ್ಚು ಸಕ್ರಿಯ (Active) ಕಂಪನಿಗಳು ಕಾರ್ಯಾಚರಿಸುತ್ತಿದ್ದು, ಸಕ್ರಿಯ ಉದ್ಯಮಗಳ ಸಂಖ್ಯೆಯಲ್ಲಿಯೂ ಮಹಾರಾಷ್ಟ್ರ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.