image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

80ನೇ ಸ್ವಾತಂತ್ರ್ಯ ದಿನ: 78 ಶೌರ್ಯ ಪ್ರಶಸ್ತಿ ಘೋಷಿಸಿದ ರಾಷ್ಟ್ರಪತಿ

80ನೇ ಸ್ವಾತಂತ್ರ್ಯ ದಿನ: 78 ಶೌರ್ಯ ಪ್ರಶಸ್ತಿ ಘೋಷಿಸಿದ ರಾಷ್ಟ್ರಪತಿ

ನವದೆಹಲಿ : 80ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಕ್ಷಣಾ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ವೀರ ಸಿಬ್ಬಂದಿಗೆ 13 ಮರಣೋತ್ತರ ಪುರಸ್ಕಾರ ಸೇರಿದಂತೆ ಒಟ್ಟು 78 ಶೌರ್ಯ ಪ್ರಶಸ್ತಿಗಳನ್ನು ಘೋಷಿಸಿದ್ದಾರೆ. ಈ ಗೌರವಗಳಲ್ಲಿ ಒಂಬತ್ತು ಕೀರ್ತಿ ಚಕ್ರ, 19 ಶೌರ್ಯ ಚಕ್ರ, ಐದು ಬಾರ್ ಟು ಸೇನಾ ಪದಕಗಳು (ಶೌರ್ಯ) ಹಾಗೂ 36 ಸೇನಾ ಪದಕಗಳು (ಶೌರ್ಯ) ಸೇರಿವೆ. ಭಾರತದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರದ ನಂತರ ಕೀರ್ತಿ ಚಕ್ರವು ಎರಡನೇ ಅತ್ಯುನ್ನತ ಗೌರವವಾಗಿದ್ದು, ಶೌರ್ಯ ಚಕ್ರವು ಮೂರನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.

ಈ ಬಾರಿ 21 ಪ್ಯಾರಾ (ವಿಶೇಷ ಪಡೆ) ಯ ಲೆಫ್ಟಿನೆಂಟ್ ಕರ್ನಲ್ ಮನೋಜ್ ಫ್ರಾನ್ಸಿಸ್ ಮತ್ತು 2 ಪ್ಯಾರಾ (ವಿಶೇಷ ಪಡೆ) ಯ ಮೇಜರ್ ಜಿತೇಂದ್ರ ರಥೀ ಅವರಿಗೆ ಕೀರ್ತಿ ಚಕ್ರ ಪ್ರಶಸ್ತಿ ಲಭಿಸಿದೆ. ಉಳಿದ ಏಳು ಕೀರ್ತಿ ಚಕ್ರಗಳನ್ನು ಮರಣೋತ್ತರವಾಗಿ ನೀಡಲಾಗುತ್ತಿದ್ದು, 2 ಪ್ಯಾರಾ ಪಡೆಗೆ ಸೇರಿದ ಹವಿಲ್ದಾರ್ ಗಜೇಂದ್ರ ಸಿಂಗ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಜಗ್ಬೀರ್ ಸಿಂಗ್ ಮತ್ತು ಬಶೀರ್ ಅಹ್ಮದ್, ಕಾನ್ಸ್‌ಟೇಬಲ್‌ಗಳಾದ ಜಸ್ವಂತ್ ಸಿಂಗ್, ಬಲ್ವಿಂದರ್ ಸಿಂಗ್ ಮತ್ತು ತಾರಿಕ್ ಹುಸೇನ್ ಹಾಗೂ ಇನ್ಸ್‌ಪೆಕ್ಟರ್ ಸುನೀಲ್ ಕುಮಾರ್ ಅವರಿಗೆ ಈ ಅಮರ ಗೌರವ ಸಲ್ಲಿಸಲಾಗಿದೆ.

ಅಂತೆಯೇ, ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾದವರಲ್ಲಿ 36 ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ಪರಮವೀರ್, 57 ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ತರುಣ್ ವಾಸುದೇವನ್, 12 ಡೋಗ್ರಾ ರೆಜಿಮೆಂಟ್‌ನ ಮೇಜರ್ ಕೇಶವ್ ಕುಮಾರ್, 21 ಗ್ರೆನೇಡಿಯರ್ಸ್‌ನ ಮೇಜರ್ ಗೌರವ್ ಸಿಂಗ್ ಬ್ರಿಜ್ವಾಲ್, 11 ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ವಿಪೀನ್ ಕುಮಾರ್, 3 ಅಸ್ಸಾಂ ರೈಫಲ್ಸ್‌ನ ನೈಬ್ ಸುಬೇದಾರ್ ಶಂಕರ್ ರಾಮ್ ಮತ್ತು 21 ಪ್ಯಾರಾ (ವಿಶೇಷ ಪಡೆ) ನಿಂದ ನೈಬ್ ಸುಬೇದಾರ್ ದಬ್ಬಲ್ ಸಿಂಗ್ ಬಿಶ್ತ್ ಸೇರಿದ್ದಾರೆ.

ಇದರೊಂದಿಗೆ, 4 ಪ್ಯಾರಾದ ಹವಾಲ್ದಾರ್ ಜಗತ್ತರ್ ಸಿಂಗ್, 9 ರಾಷ್ಟ್ರೀಯ ರೈಫಲ್ಸ್‌ನ ಲ್ಯಾನ್ಸ್ ನಾಯಕ್ ನರೇಂದ್ರ ಸಿಂಧು (ಮರಣೋತ್ತರ), 11 ರಾಷ್ಟ್ರೀಯ ರೈಫಲ್ಸ್‌ನ ಲ್ಯಾನ್ಸ್ ನಾಯಕ್ ಕಪಿಲ್ ದೇವ್, 7 ಸಿಖ್ ಲೈಟ್ ಇನ್‌ಫಾಂಟ್ರಿಯ ಸಿಪಾಯಿ ಜಸ್ವಿಂದರ್ ಸಿಂಗ್, ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ಕಮಾಂಡರ್ ಶಿವಂ ಕುಮಾರ್ ಹಾಗೂ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಸುಧೀರ್ ಕುಮಾರ್ ಅವರು ಶೌರ್ಯ ಚಕ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೊಲೀಸ್ ಮತ್ತು ಕೇಂದ್ರ ಪಡೆಯ ಉಪ ಅಧೀಕ್ಷಕ ಧೀರಜ್ ಸಿಂಗ್ ಕಟೋಚ್, ಇನ್ಸ್‌ಪೆಕ್ಟರ್ ಅಜಯ್ ಸಿಂಗ್ ಚಿಬ್, ಉಪ ಅಧೀಕ್ಷಕ ಸುಖವೀರ್ ಸಿಂಗ್, ಸಹಾಯಕ ಸಬ್ ಇನ್ಸ್‌ಪೆಕ್ಟರ್ ನಿಯಾಜ್ ಅಹ್ಮದ್, ಉಪ ಕಮಾಂಡೆಂಟ್ ಅಂಜನಿ ಕುಮಾರ್ ಹಾಗೂ ಕಾನ್ಸ್‌ಟೇಬಲ್ ದೀಪಕ್ ಸಾಹ್ ಅವರಿಗೂ ಶೌರ್ಯ ಚಕ್ರ ಗೌರವ ಲಭಿಸಿದೆ.

Category
ಕರಾವಳಿ ತರಂಗಿಣಿ