image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗದ್ದಲದ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯ : ಉಭಯ ಸದನಗಳಲ್ಲಿ ತೀವ್ರ ವಾಕ್ಸಮರ

ಗದ್ದಲದ ನಡುವೆಯೇ ಸಂಸತ್ತಿನ ಮುಂಗಾರು ಅಧಿವೇಶನ ಮುಕ್ತಾಯ : ಉಭಯ ಸದನಗಳಲ್ಲಿ ತೀವ್ರ ವಾಕ್ಸಮರ

ನವದೆಹಲಿ:ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಇಂದು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು. ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಪರೀಕ್ಷಾ ಅಕ್ರಮಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಸಂಸತ್ತಿನಲ್ಲಿ ಸೃಷ್ಟಿಯಾದ ಗದ್ದಲದ ಪರಿಣಾಮವಾಗಿ ಲೋಕಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಅಧಿವೇಶನ ಅಂತ್ಯವಾಯಿತು.

ವಿಪಕ್ಷಗಳ ಗಲಾಟೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಲೋಕಸಭೆಯ ಕಲಾಪದಲ್ಲಿ ಭಾಗವಹಿಸಿದ್ದರು. ವಿಪಕ್ಷಗಳು ಎತ್ತಿರುವ ಎಲ್ಲಾ ವಿಷಯಗಳ ಕುರಿತು ಸುದೀರ್ಘ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದ್ದರಾದರೂ, ವಿಪಕ್ಷ ನಾಯಕ ರಾಹುಲ್ ಗಾಂಧಿ ಈ ಆಫರ್ ಅನ್ನು ತಿರಸ್ಕರಿಸಿ ಗೃಹ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದರು. ಈ ಕುರಿತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಾತನಾಡಿ, ಸರ್ಕಾರ ಚರ್ಚೆಗೆ ಸಿದ್ಧವಿದ್ದರೂ ವಿಪಕ್ಷಗಳು ಭಾಗಿಆಗದೆ ಪಲಾಯನ ಮಾಡುತ್ತಿವೆ ಎಂದು ಆರೋಪಿಸಿದರು.

ಇನ್ನೊಂದೆಡೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾವು ಉತ್ತರಾಖಂಡದಲ್ಲಿ ಭಾಗವಹಿಸಬೇಕಿದ್ದ ರ‍್ಯಾಲಿ ಸ್ಥಳವನ್ನು ಬಿಜೆಪಿ ನಾಯಕರು 'ಶುದ್ಧೀಕರಣ' ಮಾಡಿದ್ದಾರೆ ಎಂದು ಆರೋಪಿಸಿ, ಇದು ದಲಿತ ವಿರೋಧಿ ಮನಸ್ಥಿತಿ ಮತ್ತು ಅಸ್ಪೃಶ್ಯತೆಯ ಸಂಕೇತ ಎಂದು ಕಿಡಿಕಾರಿದರು. ಈ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಇಂತಹ ಆಚರಣೆಗಳನ್ನು ತಮ್ಮ ಪಕ್ಷ ಎಂದಿಗೂ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಘಟನೆಯ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಡ್ಡಾ, ಬಿಜೆಪಿ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದರು.

ಕಲಾಪ ಆರಂಭವಾಗುವ ಮುನ್ನವೇ ಸಂಸತ್ತಿನ ಮಕರ ದ್ವಾರದ ಬಳಿ ಆಡಳಿತ ಮತ್ತು ವಿರೋಧ ಪಕ್ಷಗಳ ಸಂಸದರು ಪರಸ್ಪರ ಎದುರಾಗಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ನಾಯಕರು ಕೈಯಲ್ಲಿ ಗೊಂಬೆಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಒಟ್ಟಿನಲ್ಲಿ, ಹಲವು ದಿನಗಳಿಂದ ನೆರವೇರಬೇಕಿದ್ದ ಪ್ರಮುಖ ವಿಷಯಗಳ ಚರ್ಚೆಗಳು ಗದ್ದಲದಲ್ಲೇ ಕೊಚ್ಚಿಹೋಗಿ ಅಧಿವೇಶನ ಅಂತ್ಯಗೊಂಡಿದೆ.

Category
ಕರಾವಳಿ ತರಂಗಿಣಿ