ನವದೆಹಲಿ : ವಿರೋಧ ಪಕ್ಷಗಳ ಸದಸ್ಯರ ತೀವ್ರ ಗದ್ದಲ ಹಾಗೂ ಕೋಲಾಹಲದ ನಡುವೆಯೂ ಸೋಮವಾರ ಲೋಕಸಭೆಯಲ್ಲಿ ನಾಲ್ಕು ಪ್ರಮುಖ ಮಸೂದೆಗಳನ್ನು ಮಂಡಿಸಲಾಯಿತು. ಟ್ರಿಬ್ಯೂನಲ್ಸ್ ರಿಫಾರ್ಮ್ಸ್ ಮಸೂದೆ 2026, ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ತಿದ್ದುಪಡಿ ಮಸೂದೆ 2026, ಕೇರಳ ಹೆಸರು ಬದಲಾವಣೆ ಮಸೂದೆ 2026 ಹಾಗೂ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ತಿದ್ದುಪಡಿ ಮಸೂದೆ 2026 ಈ ಸಾಲಿನಲ್ಲಿ ಮಂಡನೆಯಾದ ವಿಧೇಯಕಗಳಾಗಿವೆ. ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಕ್ರಮ ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆ ಅಕ್ರಮದ ಆರೋಪದ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ನೀಡುವಂತೆ ವಿಪಕ್ಷ ಸಂಸದರು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಮುಂದೂಡಲಾಯಿತು. ಪ್ರಸ್ತುತ ಮಳೆಗಾಲದ ಅಧಿವೇಶನದಲ್ಲಿ ಕಲಾಪಕ್ಕೆ ಪದೇ ಪದೇ ಅಡ್ಡಿಯಾಗುತ್ತಿದ್ದು, ಇದುವರೆಗೆ ಪಾಸ್ ಮಾಡಲಾದ ಎಂಟು ಮಸೂದೆಗಳ ಪೈಕಿ ಆರು ಮಸೂದೆಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ.
ಸದನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಾಜವಾದಿ ಪಕ್ಷದ ಸಂಸದ ಅಖಿಲೇಶ್ ಯಾದವ್, ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ ಹಾಗೂ ವಿದ್ಯುತ್ ಶಾಕ್ ನೀಡಿರುವುದಕ್ಕೆ ಕಾರಣವೇನು ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು. ಅಲ್ಲದೆ, ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯ ಮೂಲಕ ದೇಶದ ಸ್ವಾಯತ್ತ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಸಿಪಿಐಎಂ ಸಂಸದ ಜಾನ್ ಬ್ರಿಟ್ಟಾಸ್ ಮಾತನಾಡಿ, ಜುಲೈ 20 ರಂದು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮತ್ತು ಅಯೋಧ್ಯೆ ಹಗರಣದ ಕುರಿತು ವಿಪಕ್ಷಗಳು ಸ್ಪಷ್ಟನೆ ಕೋರಿದ್ದರೂ, ಸರ್ಕಾರ ಚರ್ಚೆಗೆ ಅವಕಾಶ ನೀಡದೆ ಬಲವಂತವಾಗಿ ಮಸೂದೆಗಳನ್ನು ತರಲು ನೋಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.