ನವದೆಹಲಿ : ತಂದೆಯಾದವನು ತನ್ನ ಮಗಳ ಸಾರ್ವಜನಿಕ ಭವಿಷ್ಯ ನಿಧಿ (PPF) ಖಾತೆಯಲ್ಲಿದ್ದ ಹಣವನ್ನು ಹಿಂಪಡೆದು, ಅದನ್ನು ಆಕೆಗೆ ನೀಡಬೇಕಾದ ಜೀವನಾಂಶದ (Maintenance) ವೆಚ್ಚಕ್ಕೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಗಳ ಪಿಪಿಎಫ್ ಖಾತೆಯ ಸಂಪೂರ್ಣ ಮೊತ್ತವನ್ನು ಶೇಕಡಾ 8 ರಷ್ಟು ಬಡ್ಡಿ ಸಮೇತ ಹಿಂತಿರುಗಿಸುವಂತೆ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರಿದ್ದ ಪೀಠವು ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆಯಂತೆ, ಸುಧೀರ್ ಕವಾತ್ರ ಎಂಬುವವರು 1999 ರಲ್ಲಿ ತಮ್ಮ ಮಗಳು ಶ್ಯಾಮ್ಲಿ ಕವಾತ್ರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆದಿದ್ದರು. ಆದರೆ 2017 ರಲ್ಲಿ ಖಾತೆಯು ಮುಕ್ತಾಯದ (Maturity) ಅವಧಿಗೆ ಬಂದಾಗ, ಮಗಳ ಶಿಕ್ಷಣ ಮತ್ತು ಯೋಗಕ್ಷೇಮದ ನೆಪ ಹೇಳಿ 2016 ರಲ್ಲೇ ತಂದೆಯು ಬರೋಬ್ಬರಿ ₹8 ಲಕ್ಷಕ್ಕೂ ಹೆಚ್ಚಿನ ಸಂಪೂರ್ಣ ಮೊತ್ತವನ್ನು ಹಿಂಪಡೆದು ಖಾತೆಯನ್ನು ಮುಚ್ಚಿರುವುದು ಬೆಳಕಿಗೆ ಬಂದಿತ್ತು. ಪೋಷಕರ ನಡುವಿನ ವೈಮನಸ್ಸಿನಿಂದ ತಾಯಿಯೊಂದಿಗೆ ವಾಸಿಸುತ್ತಿರುವ ಕಾಲೇಜು ವಿದ್ಯಾರ್ಥಿನಿ ಶ್ಯಾಮ್ಲಿ, ಶಿಕ್ಷಣ ವೆಚ್ಚ ಭರಿಸಲು ಸಂಕಷ್ಟ ಎದುರಿಸುತ್ತಿದ್ದು, ತಂದೆಯು ಅಕ್ರಮವಾಗಿ ಈ ಹಣವನ್ನು ಡ್ರಾ ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ತಂದೆ ಸುಧೀರ್, ಮಗಳ ಯೋಗಕ್ಷೇಮಕ್ಕಾಗಿ ತಾವು ಈಗಾಗಲೇ ಸುಮಾರು ₹6 ಲಕ್ಷ ಜೀವನಾಂಶ ನೀಡಿದ್ದು, ಅದನ್ನು ಈ ಪಿಪಿಎಫ್ ಮೊತ್ತಕ್ಕೆ ಸರಿದೂಗಿಸಬೇಕು ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ದೆಹಲಿ ಹೈಕೋರ್ಟ್, ಮಗುವಿನ ಹೆಸರಿನಲ್ಲಿ ಮಾಡಿದ ಹೂಡಿಕೆಗೆ ಆ ಮಗುವೇ ಸಂಪೂರ್ಣ ಹಕ್ಕುದಾರಳು. ತಂದೆಯು ಕೇವಲ 'ಪಾಲಕ' (Guardian) ಸಾಮರ್ಥ್ಯದಲ್ಲಿ ಮಾತ್ರ ಆ ಹಣವನ್ನು ಹೊಂದಿರಬಹುದೇ ಹೊರತು, ಮಗುವಿಗೆ ನೀಡಬೇಕಾದ ದೈನಂದಿನ ಜೀವನಾಂಶದ ಪ್ರತ್ಯೇಕ ಕಾನೂನುಬದ್ಧ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅದನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಮಗುವಿನ ಭವಿಷ್ಯದ ಹೂಡಿಕೆಯ ಹಣವನ್ನು ತಂದೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಬಳಸುವುದು ಹಣದ ದುರ್ಬಳಕೆಯಾಗುತ್ತದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ.