image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಎಫ್‌ಸಿಆರ್‌ಎ ತಿದ್ದುಪಡಿ ಪಾರದರ್ಶಕತೆಗಾಗಿ: ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಸ್ಪಷ್ಟನೆ

ಎಫ್‌ಸಿಆರ್‌ಎ ತಿದ್ದುಪಡಿ ಪಾರದರ್ಶಕತೆಗಾಗಿ: ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಸ್ಪಷ್ಟನೆ

ನವದೆಹಲಿ : ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ (ಎಫ್‌ಸಿಆರ್‌ಎ) ತರಲಾದ ತಿದ್ದುಪಡಿಗಳು ಹೆಚ್ಚಿನ ಪಾರದರ್ಶಕತೆ ತರುವ ಗುರಿ ಹೊಂದಿದ್ದು, ಸಂಸ್ಥೆಗಳು ನಿಗದಿತ ಪ್ರಕ್ರಿಯೆಯ ಮೂಲಕವೇ ಹಣ ಪಡೆಯುವ ನಿರೀಕ್ಷೆ ಹೊಂದಿವೆ ಎಂದು ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ತಿಳಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮರುಮಂಡಿಸಲಾದ ಎಫ್‌ಸಿಆರ್‌ಎ (ತಿದ್ದುಪಡಿ) ಮಸೂದೆ, 2026ಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗಿರುವ ತಪ್ಪು ಕಲ್ಪನೆಗಳಿಗೆ ಅವರು ಸಾಮಾಜಿಕ ಜಾಲತಾಣದ ಸರಣಿ ಪೋಸ್ಟ್‌ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸಾರ್ವಜನಿಕ ಮತ್ತು ರಾಜಕೀಯ ವಲಯಗಳಲ್ಲಿ ವಿದೇಶಿ ಹಣಕಾಸು ಹರಿವನ್ನು ನಿಯಂತ್ರಿಸುವುದು ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೈಗೊಂಡ ಸಾರ್ವಭೌಮ ಕ್ರಮವಾಗಿದೆ ಎಂದು ಹೇಳಿರುವ ಕ್ವಾತ್ರಾ, ಅಮೆರಿಕದಲ್ಲಿ ಜಾರಿಯಲ್ಲಿರುವ ಎಫ್​ಎಆರ್​ಎ (1938) ಹಾಗೂ ಎಫ್​ಎಟಿಎ (2010) ಕಾನೂನುಗಳನ್ನು ಉಲ್ಲೇಖಿಸಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯಾ (2018), ಕೆನಡಾ (2024) ಹಾಗೂ ಯುಕೆ (2025) ಜಾರಿಗೆ ತಂದಿರುವ ನಿಯಮಗಳನ್ನು ನೆನಪಿಸಿ, ಯುರೋಪಿಯನ್ ಒಕ್ಕೂಟ ಕೂಡ ಇಂತಹ ಕಾನೂನು ರೂಪಿಸುತ್ತಿರುವುದಾಗಿ ತಿಳಿಸಿದ್ದಾರೆ.

ಎಫ್‌ಸಿಆರ್‌ಎ ತಿದ್ದುಪಡಿಗಳು ಭಾರತ ಸರ್ಕಾರಕ್ಕೆ ಚರ್ಚ್‌ಗಳು ಮತ್ತು ದತ್ತಿ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡಲಿವೆ ಎಂದು ಅಮೆರಿಕದ ಜನಪ್ರತಿನಿಧಿಯೊಬ್ಬರು ವ್ಯಕ್ತಪಡಿಸಿದ್ದ ಕಳವಳವನ್ನು ಅವರು ತಳ್ಳಿಹಾಕಿದ್ದಾರೆ. ಪೂಜಾ ಸ್ಥಳಗಳು ತಮ್ಮದೇ ಆದ ರಕ್ಷಣೆ ಹೊಂದಿರುತ್ತವೆ ಎಂದು ತಿಳಿಸಿರುವ ಅವರು, ನೋಂದಣಿ ರದ್ದಾದ ಸಂಘಟನೆಯೊಂದು ಪೂಜಾ ಸ್ಥಳಕ್ಕೆ ಸಂಬಂಧಿಸಿದ ಆಸ್ತಿಯನ್ನು ಸೃಷ್ಟಿಸಿದ್ದರೆ, ಅದನ್ನು ಅದೇ ಧರ್ಮದ ಮತ್ತೊಂದು ಎಫ್​ಸಿಆರ್​ಎ ನೋಂದಾಯಿತ ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.

ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳಿದ್ದು (ಎನ್‌ಜಿಒ), ಅವುಗಳಲ್ಲಿ ಕೇವಲ 14,450 ಸಂಸ್ಥೆಗಳು ಮಾತ್ರ ಎಫ್‌ಸಿಆರ್‌ಎ ನೋಂದಣಿ ಹೊಂದಿವೆ. ಹೀಗಾಗಿ ನಾಗರಿಕ ಸಮಾಜದ ಬಹುಪಾಲು ಸಂಸ್ಥೆಗಳು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿವೆ. 1976ರಲ್ಲಿ ಜಾರಿಗೆ ಬಂದ ಈ ಕಾಯ್ದೆಯು 2010ರಲ್ಲಿ ಆಧುನಿಕ ಚೌಕಟ್ಟನ್ನು ಅಳವಡಿಸಿಕೊಂಡಿದ್ದು, 2016, 2018 ಹಾಗೂ 2020ರ ತಿದ್ದುಪಡಿಗಳ ಮೂಲಕ ಮತ್ತಷ್ಟು ಬಲಗೊಂಡಿದೆ ಎಂದು ರಾಯಭಾರಿ ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ