ಕೋಲ್ಕತ್ತಾ : ಕೌಲಾಲಂಪುರದಿಂದ 159 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ಮಲೇಷ್ಯಾ ಏರ್‌ಲೈನ್ಸ್‌ನ ಎಂಎಚ್-184 (MH-184) ವಿಮಾನವು ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ಲೇಸರ್ ಬೆಳಕಿನಿಂದಾಗಿ ಆತಂಕ ಎದುರಿಸಿದ ಘಟನೆ ನಡೆದಿದೆ. ರನ್‌ವೇಯಿಂದ ಸುಮಾರು 8 ನಾಟಿಕಲ್ ಮೈಲಿ ದೂರದಲ್ಲಿದ್ದಾಗ ಮಧ್ಯಮಗ್ರಾಮ್-ಬಾರಾಸತ್ ಭಾಗದಿಂದ ಕಾಕ್‌ಪಿಟ್‌ಗೆ ತೀವ್ರವಾದ ಲೇಸರ್ ಬೆಳಕು ಬಿದ್ದಿದ್ದರಿಂದ ಪೈಲಟ್‌ಗೆ ಕ್ಷಣಕಾಲ ದೃಷ್ಟಿ ಮಂಜಾಗಿ ದಿಕ್ಕು ತೋಚದಂತಾಯಿತು. ಇದರಿಂದಾಗಿ ವಿಮಾನವು ಗಗನದಲ್ಲೇ ಕೆಲವು ಸುತ್ತುಗಳನ್ನು ಹೊಡೆಯಬೇಕಾಯಿತು. ಬಳಿಕ ಪೈಲಟ್ 2ನೇ ಬಾರಿಗೆ ಯಶಸ್ವಿಯಾಗಿ ಪ್ರಯತ್ನಿಸಿ, ರಾತ್ರಿ 11:25ರ ಸುಮಾರಿಗೆ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ವಿಮಾನ ನಿಲ್ದಾಣ ಪ್ರಾಧಿಕಾರವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದೆ.
ಇನ್ನೊಂದೆಡೆ, ಮಹಾರಾಷ್ಟ್ರದ ಬಾರಾಮತಿ ಏರ್‌ಸ್ಟ್ರಿಪ್‌ನಲ್ಲಿ ಕಾರ್ವರ್ ಏವಿಯೇಷನ್‌ನ 'VT-SEX' ತರಬೇತಿ ವಿಮಾನವೊಂದು ರನ್‌ವೇ ದಾಟಿ ಅಪಘಾತಕ್ಕೀಡಾಗಿದೆ. ಮಧ್ಯಾಹ್ನ 12:35ರ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ತರಬೇತಿಯಲ್ಲಿದ್ದ ಪೈಲಟ್ ಹಾಗೂ ಕೆಡೆಟ್ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದು, ವಿಮಾನಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಕಳೆದ ಜನವರಿಯಲ್ಲಿ ಇದೇ ಏರ್‌ಸ್ಟ್ರಿಪ್‌ನಲ್ಲಿ ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಅಂದಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದರು ಎಂಬುದು ಉಲ್ಲೇಖಾರ್ಹ.