image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಗ್ಲಾಸ್ಗೋ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆ ಸರಿಪಡಿಸಿದ ಲವ್ಲಿನಾ: ಪ್ರಧಾನಿ ಮೋದಿ ವಿಶೇಷ ಪ್ರಶಂಸೆ

ಗ್ಲಾಸ್ಗೋ ರೆಸ್ಟೋರೆಂಟ್‌ನಲ್ಲಿ ಭಾರತದ ನಕ್ಷೆ ಸರಿಪಡಿಸಿದ ಲವ್ಲಿನಾ: ಪ್ರಧಾನಿ ಮೋದಿ ವಿಶೇಷ ಪ್ರಶಂಸೆ

ನವದೆಹಲಿ : ಕಾಮನ್‌ವೆಲ್ತ್ ಕ್ರೀಡಾಕೂಟದ ವೇಳೆ ಗ್ಲಾಸ್ಗೋದಲ್ಲಿ ಭಾರತದ ವಿರೂಪಗೊಂಡ ನಕ್ಷೆಯನ್ನು ನೋಡಿ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ಸರಿಪಡಿಸಿದ ಭಾರತೀಯ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಅವರ ನಡೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಯೋತ್ಸವದ ಸಂಭ್ರಮದಲ್ಲಿದ್ದಾಗಲೂ ದೇಶದ ಪ್ರತಿಷ್ಠೆಯನ್ನು ಕಾಯ್ದುಕೊಂಡ ಈ ಕ್ಷಣವು ದೀರ್ಘಕಾಲ ಜನರ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಬಣ್ಣಿಸಿದ್ದಾರೆ. ಮಹಿಳೆಯರ 75 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಲವ್ಲಿನಾ, ನವದೆಹಲಿಯಲ್ಲಿ ನಡೆದ ಭಾರತದ ಪದಕ ವಿಜೇತರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಡ್ಸೆ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ. ಉಷಾ ಉಪಸ್ಥಿತರಿದ್ದ ಈ ಸಭೆಯಲ್ಲಿ ಕ್ರೀಡಾಪಟುಗಳು ಅತ್ಯಂತ ಭಾವನಾತ್ಮಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪ್ರಧಾನಿ ಕಚೇರಿ ಹಂಚಿಕೊಂಡ ಸಂವಾದದ ವೀಡಿಯೊದಲ್ಲಿ ಮೋದಿ ಅವರು, "ಏನಾಯಿತು, ನೀವು ಆ ರೆಸ್ಟೋರೆಂಟ್‌ನವರ ಜೊತೆ ಜಗಳವಾಡುತ್ತಿದ್ದಿರಾ?" ಎಂದು ಲವ್ಲಿನಾ ಅವರ ಬಳಿ ಹಾಸ್ಯಭರಿತವಾಗಿ ಕೇಳಿದರು. ಇದಕ್ಕೆ ಉತ್ತರಿಸಿದ ಲವ್ಲಿನಾ, "ಅದು ಕ್ರೀಡಾಕೂಟದ ಕೊನೆಯ ದಿನವಾಗಿತ್ತು. ನಾವೆಲ್ಲರೂ ವಿಜಯದ ಸಂಭ್ರಮದಲ್ಲಿದ್ದೆವು. ಆ ಸಮಯದಲ್ಲಿ ಅಲ್ಲಿ ವಿರೂಪಗೊಂಡಿದ್ದ ಭಾರತದ ನಕ್ಷೆಯನ್ನು ಕಂಡು ನನಗೆ ಸರಿ ಅನಿಸಲಿಲ್ಲ. ಹೀಗಾಗಿ ಅವರಿಗೆ ನಯವಾಗಿ ಮನವರಿಕೆ ಮಾಡಿಕೊಟ್ಟೆ, ಅವರು ಕೂಡ ತಕ್ಷಣವೇ ಬದಲಾವಣೆ ಮಾಡಿದರು" ಎಂದು ವಿವರಿಸಿದರು. ಲವ್ಲಿನಾ ಅವರ ಈ ಜಾಗರೂಕತೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, "ವಿಜಯದ ಖುಷಿಯಲ್ಲಿದ್ದಾಗಲೂ ನಕ್ಷೆಯ ಮಹತ್ವವನ್ನು ಗುರುತಿಸಿ ಸರಿಪಡಿಸಿದ ನಿಮ್ಮ ಈ ವೀಡಿಯೊ ಸಾಮಾನ್ಯವಾದದ್ದಲ್ಲ. ಇದು ಪ್ರತಿಯೊಬ್ಬ ಭಾರತೀಯನಿಗೂ ಸ್ಫೂರ್ತಿಯಾಗಿದ್ದು, ಸುದೀರ್ಘ ಕಾಲ ನೆನಪಿನಲ್ಲಿ ಇರಲಿದೆ" ಎಂದರು.

ಗ್ಲಾಸ್ಗೋದಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಭಾರತವು 13 ಚಿನ್ನ ಸೇರಿದಂತೆ ಒಟ್ಟು 39 ಪದಕಗಳನ್ನು ಗೆದ್ದು ನಾಲ್ಕನೇ ಸ್ಥಾನ ಗಳಿಸಿದೆ. ಇದರಲ್ಲಿ ಬಾಕ್ಸಿಂಗ್ ತಂಡವೇ ಬರೋಬ್ಬರಿ 7 ಚಿನ್ನದ ಪದಕಗಳನ್ನು ದೇಶಕ್ಕೆ ತಂದುಕೊಟ್ಟು ಹೊಸ ಇತಿಹಾಸ ಬರೆದಿದೆ. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಬಾಕ್ಸರ್ ನರೇಂದರ್ ಬರ್ವಾಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಈ ಹಿಂದೆ ತಮಗಾದ ತಮಾಷೆಯ ಅನುಭವವೊಂದನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಕೇಳಿದ ಪ್ರಧಾನಿ ಮೋದಿ ನಗೆಗಡಲಿನಲ್ಲಿ ತೇಲಿದ್ದಾರೆ. 2015ರ 'ವರ್ಲ್ಡ್ ಮಿಲಿಟರಿ ಗೇಮ್ಸ್' ಪಂದ್ಯಾವಳಿಯಲ್ಲಿ ನರೇಂದರ್ ಬರ್ವಾಲ್ ಅವರು ಪಾಕಿಸ್ತಾನದ ಬಾಕ್ಸರ್ ವಿರುದ್ಧ ಸೆಣಸಾಡಿ ಗೆಲುವು ಸಾಧಿಸಿದ್ದರು. ಪಂದ್ಯದ ವೇಳೆ ಇಬ್ಬರೂ ಬಾಕ್ಸರ್‌ಗಳ ಮುಖಕ್ಕೆ ಗಾಯಗಳಾಗಿದ್ದರಿಂದ ಚಿಕಿತ್ಸೆಗೆಂದು ಒಟ್ಟಿಗೆ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಪಾಕ್ ಬಾಕ್ಸರ್, 'ನಿಮ್ಮ ಹೆಸರು ನರೇಂದರ್, ನಿಮ್ಮ ಕೋಚ್ ಹೆಸರು ನರೇಂದ್ರ ರಾಣಾ, ನಿಮ್ಮ ಪ್ರಧಾನ ಮಂತ್ರಿಯ ಹೆಸರೂ ನರೇಂದ್ರ ಮೋದಿ...' ನನಗೆ ಈ 'ನರೇಂದ್ರ' ಅನ್ನೋ ಹೆಸರನ್ನ ಕೇಳಿದರೇನೇ ಕೋಪ ಬರುವಂತಾಗಿದೆ ಎಂದು ತಮಾಷೆಯಾಗಿ ಹೇಳಿದ್ದನ್ನು ಬರ್ವಾಲ್ ಮೋದಿ ಅವರೊಂದಿಗೆ ಹೇಳಿಕೊಂಡಿದ್ದಾರೆ. ಅಭಿನಂದನಾ ಸಮಾರಂಭದಲ್ಲಿ ಈ ಸ್ವಾರಸ್ಯಕರ ಘಟನೆಯನ್ನು ವಿವರಿಸುತ್ತಿದ್ದಂತೆ ಪ್ರಧಾನಿ ಮೋದಿ ಸೇರಿದಂತೆ ಅಲ್ಲಿದ್ದವರೆಲ್ಲರೂ ಜೋರಾಗಿ ನಕ್ಕಿದ್ದಾರೆ.

Category
ಕರಾವಳಿ ತರಂಗಿಣಿ