ಹಲೀಶಹರ್: ಮೃತಪಟ್ಟ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ಪಡೆಯನ್ನು ಹಲೀಶಹರ್‌ನಲ್ಲಿ ಪ್ರತಿಭಟನಾಕಾರರು ತಡೆದ ಪರಿಣಾಮ ಸ್ಥಳದಲ್ಲಿ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿಗಳ ಪ್ರಕಾರ, ಪ್ರತಿಭಟನಾಕಾರರು ಮಮತಾ ಬ್ಯಾನರ್ಜಿ ಅವರ ವಾಹನವನ್ನು ಸುತ್ತುವರಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಾರಿನ ಮೇಲೆ ಮಣ್ಣು ಎರಚಿದ್ದಲ್ಲದೆ, ನೀರಿನ ಬಾಟಲಿಗಳು, ಬೂಟುಗಳು ಹಾಗೂ ಪಾದರಕ್ಷೆಗಳನ್ನು ಬೆಂಗಾವಲು ಪಡೆಯ ವಾಹನಗಳತ್ತ ತೂರಿದರು. TMC ಮುಖ್ಯಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅವರನ್ನು 'ಕಳ್ಳಿ' ಹಾಗೂ 'ಡಕಾಯಿತರ ರಾಣಿ' ಎಂದು ಕರೆದು ಕಡು ಆಕ್ರೋಶ ವ್ಯಕ್ತಪಡಿಸಿದರು. ಮೃತ ಕಾರ್ಯಕರ್ತ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ್ದು, ಸ್ಥಳೀಯ ಪೊಲೀಸರು ನಡೆಸಿದ ಹಲ್ಲೆಯಿಂದಲೇ ಅವರು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಗಂಭೀರ ಆರೋಪ ಮಾಡಿದ್ದಾರೆ.