ಮಹಾರಾಷ್ಟ್ರ : ಛತ್ರಪತಿ ಸಂಭಾಜಿನಗರದ ವಾಲುಜ್ ಎಂಐಡಿಸಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಭದ್ರತಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪಿಎಸ್‌ಐ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ತಮ್ಮ ಮನೆಗೆ ಭೇಟಿ ನೀಡಲು ಬರುವ ಸಾರ್ವಜನಿಕರನ್ನು ಹಾಗೂ ಸಂದರ್ಶಕರನ್ನು ತಡೆಯಲಾಗುತ್ತಿದೆ ಮತ್ತು ಅವರೊಂದಿಗೆ ಪೊಲೀಸ್ ಅಧಿಕಾರಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೀಪ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಮಹಾರಾಷ್ಟ್ರ ಸಿಐಡಿ ಸಿಬ್ಬಂದಿ ಸಾಮಾನ್ಯ ಉಡುಪಿನಲ್ಲಿ ತಮ್ಮ ನಿವಾಸದ ಸಮೀಪ ನಿಯೋಜಿತರಾಗಿದ್ದು, "Hit Spray" ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ಮೂಲಕ ತಮ್ಮ ಚಲನವಲನದ ಮಾಹಿತಿ ಕಳುಹಿಸುತ್ತಿದ್ದಾರೆ ಎಂದು ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ. ದೀಪ್ಕೆ ಮತ್ತು ಪೊಲೀಸರ ನಡುವೆ ನಡೆದ ಈ ವಾಗ್ವಾದದ ಎರಡು ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೈರಲ್ ವಿಡಿಯೋವೊಂದರಲ್ಲಿ ಅಧಿಕಾರಿ ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಳ್ಳುವ ದೀಪ್ಕೆ, "ನಾನು ಜನರನ್ನು ನನ್ನ ಮನೆಗೆ ಬರುವಂತೆ ಕೇಳುತ್ತಿದ್ದೇನೆ. ಅವರನ್ನು ಒಳಗೆ ಬಿಡುವುದರಲ್ಲಿ ನಿಮಗೇನು ಸಮಸ್ಯೆ? ನೀವು ದಿಲ್ಲಿ ಪೊಲೀಸರಂತೆ ಏಕೆ ವರ್ತಿಸುತ್ತಿದ್ದೀರಿ? ನಾನು ಯಾರನ್ನು ಭೇಟಿಯಾಗಬೇಕು, ಯಾರನ್ನು ಭೇಟಿಯಾಗಬಾರದು ಎಂಬುದನ್ನು ನೀವು ನನಗೆ ಹೇಳುವಂತಿಲ್ಲ" ಎಂದು ಗರಂ ಆಗಿ ಹೇಳಿರುವುದು ಕಂಡುಬಂದಿದೆ. ಮತ್ತೊಂದು ವಿಡಿಯೋದಲ್ಲಿ, ದೀಪ್ಕೆ ಅವರು ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಫೋನ್‌ನಲ್ಲಿ ಮಾತನಾಡಿ, ಸಂದರ್ಶಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಪಿಎಸ್‌ಐ ಅವರನ್ನು ತಮ್ಮ ನಿವಾಸದ ಭದ್ರತಾ ಕರ್ತವ್ಯದಿಂದ ತಕ್ಷಣವೇ ಕೈಬಿಡುವಂತೆ ಆಗ್ರಹಿಸಿದ್ದಾರೆ.