ಒಡಿಶಾ : ಒಡಿಶಾದ ಚಾಂಡಿಪುರದಲ್ಲಿರುವ ಸಮಗ್ರ ಪರೀಕ್ಷಾ ಶ್ರೇಣಿಯಿಂದ ಮಧ್ಯಮ ಶ್ರೇಣಿಯ ‘ಅಗ್ನಿ-4’ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಭಾರತವು ಆಗಸ್ಟ್ 6 ರಂದು ಯಶಸ್ವಿಯಾಗಿ ಪರೀಕ್ಷಿಸಿದೆ. ಕಾರ್ಯತಂತ್ರದ ಪಡೆಗಳ ಕಮಾಂಡ್ (SFC) ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಾಚರಣೆಯು ಕ್ಷಿಪಣಿಯ ಎಲ್ಲಾ ಕಾರ್ಯಾಚರಣೆ ಹಾಗೂ ತಾಂತ್ರಿಕ ನಿಯತಾಂಕಗಳನ್ನು ಯಶಸ್ವಿಯಾಗಿ ಮೌಲ್ಯೀಕರಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಘನ-ಇಂಧನ ರಾಕೆಟ್ ಮೋಟಾರ್ ಹೊಂದಿರುವ ಈ ಎರಡು ಹಂತದ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಯು 4,000 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದೆ.
ಭಾರತವು ತನ್ನ ರಕ್ಷಣಾ ತಂತ್ರಜ್ಞಾನವನ್ನು ನಿರಂತರವಾಗಿ ಬಲಪಡಿಸುತ್ತಿದ್ದು, ಜುಲೈ 8 ರಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ಪಿನಾಕಾ ದೀರ್ಘ-ಶ್ರೇಣಿಯ ಮಾರ್ಗದರ್ಶಿ ರಾಕೆಟ್ (LRGR) ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಚಂಡಿಪುರದ ಪರೀಕ್ಷಾ ಶ್ರೇಣಿಯಲ್ಲೇ ನಡೆದ ಈ ಉಡಾವಣೆಯಲ್ಲಿ ರಾಕೆಟ್ 60 ಕಿಲೋಮೀಟರ್ ವ್ಯಾಪ್ತಿಯ ಕನಿಷ್ಠ ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ ತನ್ನ ಯೋಜಿತ ಉದ್ದೇಶಗಳನ್ನು ಪೂರೈಸಿತ್ತು.
ಅಲ್ಲದೆ, ಜೂನ್ ತಿಂಗಳಲ್ಲಿ ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ದೀರ್ಘ-ಶ್ರೇಣಿಯ ಭೂ ದಾಳಿ ಕ್ರೂಸ್ ಕ್ಷಿಪಣಿಯ (LRLACM) ಹಾರಾಟ ಪರೀಕ್ಷೆಯನ್ನು ಸಹ DRDO ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ADE) ನೇತೃತ್ವದಲ್ಲಿ ವಿನ್ಯಾಸಗೊಳಿಸಲಾದ ಈ ಕ್ಷಿಪಣಿ ಯೋಜನೆಯ ಯಶಸ್ಸಿಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು DRDO ವಿಜ್ಞಾನಿಗಳು, ವಾಯುಪಡೆ ಹಾಗೂ ನೌಕಾಪಡೆಯ ಪ್ರತಿನಿಧಿಗಳು ಮತ್ತು ಕೈಗಾರಿಕಾ ಪಾಲುದಾರರ ಶ್ರಮವನ್ನು ಶ್ಲಾಘಿಸಿದ್ದಾರೆ.