ಮಹಾರಾಷ್ಟ್ರ : ದೇಶಾದ್ಯಂತ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಕಾಕ್ರೋಚ್ ಜನತಾ ಪಾರ್ಟಿ (CJP) ಮುಂದಿನ ತಿಂಗಳು 'ಕ್ಯಾ ಬೋಲ್ತಿ ಪಬ್ಲಿಕ್' (Kya Bolti Public) ಎಂಬ ಬೃಹತ್ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅಭಿಯಾನದ ಮೂಲಕ ದೇಶದ ಪ್ರಸ್ತುತ ಪರಿಸ್ಥಿತಿ ಹಾಗೂ ಜನರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಬಗ್ಗೆ ಜನರ ಅಭಿಪ್ರಾಯ ತಿಳಿಯಲಿದ್ದೇವೆ ಎಂದು ಹೇಳಿದರು.
ನೀಟ್ ಪೇಪರ್ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದು, ಇದು ವಿದ್ಯಾರ್ಥಿಗಳ ಹೋರಾಟಕ್ಕೆ ಸಿಕ್ಕ ಬೃಹತ್ ಗೆಲುವಾಗಿದೆ ಎಂದು ಅವರು ವರ್ಣಿಸಿದರು. ಕಳೆದ 10-12 ವರ್ಷಗಳಲ್ಲಿ ಸರ್ಕಾರವು ಜನರ ಮನಸ್ಸಿನಲ್ಲಿ ಸೃಷ್ಟಿಸಿದ್ದ ಭೀತಿಯ ವಾತಾವರಣ ಈಗ ಅಂತ್ಯಗೊಂಡಿದೆ ಎಂದ ಅವರು, ಇಂದು ಒಬ್ಬ ಸಚಿವರ ರಾಜೀನಾಮೆ ಕೇಳಿರುವ ಜನರು, ನಾಳೆ ಇತರರ ರಾಜೀನಾಮೆಯನ್ನೂ ಕೇಳಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತು ಪಂಡಿತ್ ನೆಹರೂ ಅವರ ವಿಕಸಿತ ಭಾರತದ ಕನಸಿನಂತೆ ಸಿಜೆಪಿ ಕಾರ್ಯನಿರ್ವಹಿಸಲಿದ್ದು, ಭಾರತದ ಸಂವಿಧಾನವೇ ತಮ್ಮ ಪಕ್ಷದ ಸಿದ್ಧಾಂತವಾಗಿದೆ ಎಂದು ದೀಪ್ಕೆ ಸ್ಪಷ್ಟಪಡಿಸಿದರು. ದೇಶದಲ್ಲಿ ನಿರುದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ವ್ಯಾಪಾರೀಕರಣ ಪ್ರಮುಖ ಸವಾಲುಗಳಾಗಿದ್ದು, ಶಿಕ್ಷಣ ಸುಧಾರಣೆಗಾಗಿ ಪಕ್ಷವು ಆಂದೋಲನ ರೂಪಿಸಲಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಜೆಪಿ ಮುಖ್ಯ ವಕ್ತಾರ ಸೌರವ್ ದಾಸ್, ವಕ್ತಾರ ಅಶುತೋಷ್ ರಾಂಕಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.