ಮುಂಬೈ : ಕಿರಿಯ ಮಹಿಳಾ ಸಹೋದ್ಯೋಗಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ‘ತೆಹೆಲ್ಕಾ’ ಮ್ಯಾಗಜಿನ್‌ನ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ತಪ್ಪಿತಸ್ಥ ಎಂದು ತೀರ್ಪು ನೀಡಿದೆ. 2021ರಲ್ಲಿ ಗೋವಾದ ಸೆಷನ್ಸ್ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ಹೊರಡಿಸಿದ್ದ ಆದೇಶವನ್ನು ತಳ್ಳಿಹಾಕಿರುವ ಹೈಕೋರ್ಟ್, ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಅಮಿತ್ ಜಾಮ್‌ಸಂಡೇಕರ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 354ಎ, 354ಬಿ, 376(2)(ಎಫ್) ಹಾಗೂ 376(2)(ಕೆ) ಅಡಿಯಲ್ಲಿ ತೇಜ್‌ಪಾಲ್ ಅವರು ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಅಪರಾಧಗಳನ್ನು ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. 2013ರಲ್ಲಿ ಗೋವಾದ ಹೋಟೆಲ್ ಒಂದರ ಲಿಫ್ಟ್‌ನಲ್ಲಿ ಕಿರಿಯ ಮಹಿಳಾ ಉದ್ಯೋಗಿಯ ಮೇಲೆ ಈ ದೌರ್ಜನ್ಯ ನಡೆದಿತ್ತು.
ತೀರ್ಪು ಪ್ರಕಟಿಸುವಾಗ ತೇಜ್‌ಪಾಲ್ ನ್ಯಾಯಾಲಯದಲ್ಲಿ ಹಾಜರಿದ್ದರು. ತೀರ್ಪಿನ ಬಳಿಕ ಪೀಠದ ಮುಂದೆ ದಯೆಗಾಗಿ ಮನವಿ ಮಾಡಿದ ಅವರು, "ನನಗೆ ಈಗ 62 ವರ್ಷ ವಯಸ್ಸಾಗಿದೆ, ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ನಾನೊಬ್ಬ ಸಂತ್ರಸ್ತ. ನನಗೆ ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು, ದಯವಿಟ್ಟು ನನ್ನ ಬಗ್ಗೆ ದಯೆ ತೋರಿ" ಎಂದು ಗೋಗರೆದರು. ತೇಜ್‌ಪಾಲ್ ಪರ ವಕೀಲ ಆಬಾದ್ ಪೊಂಡಾ ಅವರು ಪ್ರಕರಣವು 13 ವರ್ಷ ಹಳೆಯದಾಗಿದ್ದು, ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ನೀಡುವಂತೆ ಕೋರಿದರು.
ಆದರೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂತ್ರಸ್ತೆ ಮಗಳ ವಯಸ್ಸಿನವಳಾಗಿದ್ದರೂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಸಮಾಜಕ್ಕೆ 'ಇಲ್ಲ ಎಂದರೆ ಇಲ್ಲವೇ' ಎಂಬ ಸ್ಪಷ್ಟ ಸಂದೇಶ ರವಾನೆಯಾಗಲು ಗರಿಷ್ಠ ಶಿಕ್ಷೆ ವಿಧಿಸಬೇಕು ಎಂದು ಬಲವಾಗಿ ವಾದಿಸಿದರು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ತೇಜ್‌ಪಾಲ್ ಅವರಿಗೆ ಹೈಕೋರ್ಟ್ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.