ಜಾರ್ಖಂಡ್ : ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (ಜೆಪಿಎಸ್‌ಸಿ) ಹಾಗೂ ಇತರ ನೇಮಕಾತಿ ಪರೀಕ್ಷೆಗಳ ಅಕ್ರಮಗಳ ವಿರುದ್ಧ ಹೋರಾಡುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಪೂರ್ಣ ಬೆಂಬಲ ಘೋಷಿಸಿದೆ. ಬುಧವಾರ (ಆಗಸ್ಟ್ 05) ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ತಾವು ಜಾರ್ಖಂಡ್‌ಗೆ ತೆರಳಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಪರವಾಗಿ ಧರಣಿಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಯೊಂದು ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸುವುದಾಗಿ ತಿಳಿಸಿದ ಅವರು, ತಮ್ಮ ಸಂಘಟನೆಯು ಯಾವುದೇ ಚುನಾವಣಾ ರಾಜಕಾರಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಭಾರತಕ್ಕೆ ವ್ಯವಸ್ಥೆಯನ್ನು ಸರಿಪಡಿಸುವ ಸಾಮಾಜಿಕ ಚಳುವಳಿಯ ಅಗತ್ಯವಿದ್ದು, ಸಿಜೆಪಿಯು ಒತ್ತಡ ಹೇರುವ ಪ್ರಜಾಸತ್ತಾತ್ಮಕ ಸಂಘಟನೆಯಾಗಿ ಮುಂದುವರಿಯಲಿದೆ ಎಂದರು. ಸಿದ್ಧಾಂತ ಹಾಗೂ ಪಕ್ಷಭೇದ ಮರೆತು ಜನರು ಒಗ್ಗೂಡಿದ್ದೇ ತಮ್ಮ ಚಳುವಳಿಯ ಯಶಸ್ಸಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ಜಾರ್ಖಂಡ್ ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಸಾವಿರಾರು ಅಭ್ಯರ್ಥಿಗಳು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ನೇಮಕಾತಿ ಅಕ್ರಮಗಳ ಕುರಿತು ರಾಜ್ಯದ ಹೊರಗಿನ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.