ನವದೆಹಲಿ : ಫುಕೆಟ್‌ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ (AI2379) ವಿಮಾನವು ಮಾರ್ಗಮಧ್ಯೆ ತೀವ್ರ ಸ್ವರೂಪದ ಗಾಳಿಯ ಹೊಡೆತಕ್ಕೆ (ಟರ್ಬುಲೆನ್ಸ್) ಸಿಲುಕಿ ಇದ್ದಕ್ಕಿದ್ದಂತೆ ಸುಮಾರು 300 ಅಡಿ ಕೆಳಕ್ಕೆ ಧುಮುಕಿದ ಪರಿಣಾಮ 14 ಪ್ರಯಾಣಿಕರು ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಾರಾಟದ ಮಧ್ಯೆ ವಿಮಾನವು ತೀವ್ರವಾಗಿ ಹೊಯ್ದಾಡಿದಾಗ, ಸೀಟ್ ಬೆಲ್ಟ್ ಧರಿಸದಿದ್ದ ಪ್ರಯಾಣಿಕರು ಮತ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿ ಮೇಲಕ್ಕೆ ಎಸೆಯಲ್ಪಟ್ಟು ವಿಮಾನದ ಸೀಲಿಂಗ್‌ಗೆ ಬಡಿದು ಗಾಯಗೊಂಡಿದ್ದಾರೆ.
ಈ ಘಟನೆಯಿಂದಾಗಿ ವಿಮಾನದ ಒಳಗಿನ ಸೀಲಿಂಗ್ ಪ್ಯಾನೆಲ್‌ಗಳು ಜಖಂಗೊಂಡಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಆವರಿಸಿತ್ತು. ತೀವ್ರ ತಲ್ಲಣದ ನಡುವೆಯೂ ಪೈಲಟ್ ವಿಮಾನವನ್ನು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲ್ಯಾಂಡಿಂಗ್ ತಕ್ಷಣವೇ ವಿಮಾನ ನಿಲ್ದಾಣದಲ್ಲಿದ್ದ ತುರ್ತು ವೈದ್ಯಕೀಯ ತಂಡವು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದೆ. ಇನ್ನು ಭೀಕರ ಅನುಭವ ಎದುರಿಸಿದ ಪ್ರಯಾಣಿಕರು ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ, ಹಾರಾಟದ ವೇಳೆ ಹಠಾತ್ ಗಾಳಿಯ ಪರಿಣಾಮವಾಗಿ ವಿಮಾನದ ಎತ್ತರದಲ್ಲಿ ಕ್ಷಣಾರ್ಧದ ಬದಲಾವಣೆಯಾಗಿದೆ ಎಂದು ದೃಢಪಡಿಸಿದೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಸಂಸ್ಥೆಯ ವಕ್ತಾರರು, ಪ್ರಯಾಣಿಕರ ಮತ್ತು ಸಿಬ್ಬಂದಿಯ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಘಟನೆಯ ತನಿಖೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ತಿಳಿಸಿದ್ದಾರೆ.