ನವದೆಹಲಿ : ಕೇಂದ್ರ ಸರ್ಕಾರವು ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಶೇ. 6.5ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (OFS) ಮೂಲಕ ಮಾರಾಟ ಮಾಡಲು ನಿರ್ಧರಿಸಿದೆ. ಪ್ರತಿ ಶೇರಿಗೆ ಬಂಪರ್ ರಿಯಾಯಿತಿ ದರ ನಿಗದಿಪಡಿಸಿದ ಬೆನ್ನಲ್ಲೇ ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಎಲ್‌ಐಸಿ ಶೇರು ಮೌಲ್ಯ ಶೇ. 7ರಷ್ಟು ತೀವ್ರ ಕುಸಿತ ಕಂಡಿದೆ. ಶೇರು ದರ ಪ್ರತಿ ಶೇರಿಗೆ 398.50 ರೂ. ತಲುಪಿದ್ದರಿಂದ ಕಂಪನಿಯ ಪ್ರಸ್ತುತ ಮಾರುಕಟ್ಟೆ ಬಂಡವಾಳ ಮೌಲ್ಯ ಸುಮಾರು 5.05 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. 2026ರ ವರ್ಷದಲ್ಲಿ ನಿಫ್ಟಿ-50 ಶೇ. 6ರಷ್ಟು ಕುಸಿತ ಕಂಡಿದ್ದರೆ, ಎಲ್‌ಐಸಿ ಶೇರುಗಳು ಶೇ. 6.5ರಷ್ಟು ಮೌಲ್ಯ ಕಳೆದುಕೊಂಡಿವೆ. ಪ್ರಸ್ತುತ ಶೇರು ದರವು ಸರ್ಕಾರ ನಿಗದಿಪಡಿಸಿದ ಆಫರ್ ಬೆಲೆಗಿಂತ (382 ರೂ.) ಕೇವಲ ಶೇ. 4ರಷ್ಟು ಮಾತ್ರ ಮೇಲಿದೆ.
ಸರ್ಕಾರವು ಎಲ್‌ಐಸಿಯ ಶೇ. 2.5ರಷ್ಟು ಮೂಲ ಈಕ್ವಿಟಿಯನ್ನು ಮಾರಾಟಕ್ಕಿಟ್ಟಿದ್ದು, ಹೆಚ್ಚುವರಿ ಶೇ. 4ರಷ್ಟು ಶೇರುಗಳನ್ನು ಮಾರಾಟ ಮಾಡುವ 'ಗ್ರೀನ್‌ಶೂ ಆಪ್ಷನ್' ಅನ್ನು ಸಹ ಇರಿಸಿಕೊಂಡಿದೆ. ಒಂದು ವೇಳೆ ಗ್ರೀನ್‌ಶೂ ಆಪ್ಷನ್ ಸಂಪೂರ್ಣವಾಗಿ ಬಳಕೆಯಾದರೆ, ಸರ್ಕಾರ ಒಟ್ಟು ಶೇ. 6.5ರಷ್ಟು ಪಾಲು ಮಾರಾಟ ಮಾಡಿ ಸುಮಾರು 31,000 ಕೋಟಿ ರೂ. ಸಂಗ್ರಹಿಸಲಿದೆ. ಈ ಆಫರ್ ಫಾರ್ ಸೇಲ್‌ಗೆ ಪ್ರತಿ ಶೇರಿಗೆ 382 ರೂ.ಗಳ ಫ್ಲೋರ್ ಬೆಲೆ ನಿಗದಿಪಡಿಸಲಾಗಿದ್ದು, ಇದು ಸೋಮವಾರದ ಮುಕ್ತಾಯದ ಬೆಲೆಗೆ ಹೋಲಿಸಿದರೆ ಶೇ. 11ರಷ್ಟು ಭಾರಿ ರಿಯಾಯಿತಿಯಾಗಿದೆ.
ಪ್ರಸ್ತುತ ಎಲ್‌ಐಸಿಯಲ್ಲಿ ಕೇಂದ್ರ ಸರ್ಕಾರವು ಶೇ. 96.5ರಷ್ಟು ಪಾಲು ಹೊಂದಿದ್ದು, ಸಾರ್ವಜನಿಕ ಹೂಡಿಕೆದಾರರ ಬಳಿ ಕೇವಲ ಶೇ. 3.5ರಷ್ಟು ಪಾಲು ಮಾತ್ರ ಇದೆ. ಈ ಪಾಲು ಮಾರಾಟ ಪ್ರಕ್ರಿಯೆ ಪೂರ್ಣಗೊಂಡರೆ ಸರ್ಕಾರದ ಪಾಲು ಶೇ. 90ಕ್ಕೆ ಕುಸಿಯಲಿದೆ. ಭಾರತೀಯ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಮಂಡಳಿಯ (SEBI) ನಿಯಮಾವಳಿಗಳ ಪ್ರಕಾರ, ಸಾರ್ವಜನಿಕ ಪಾಲನ್ನು ಕನಿಷ್ಠ ಶೇ. 10ಕ್ಕೆ ಹೆಚ್ಚಿಸಲು ಎಲ್‌ಐಸಿಗೆ ಮೇ 2027ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ವರದಿಯಾಗಿದೆ.