image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೀಟ್‌ ಪ್ರತಿಭಟನೆ: ವಿದ್ಯಾರ್ಥಿಗಳ ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಅಸ್ತು

ನೀಟ್‌ ಪ್ರತಿಭಟನೆ: ವಿದ್ಯಾರ್ಥಿಗಳ ಎಫ್‌ಐಆರ್‌ ಹಿಂಪಡೆಯಲು ಸುಪ್ರೀಂ ಅಸ್ತು

ನವದೆಹಲಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ವಾಪಸ್‌ ಪಡೆಯಲು ರಾಜ್ಯ ಸರ್ಕಾರಗಳು ಸ್ವತಂತ್ರ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ನೀಡಿದೆ. ಆದಾಗ್ಯೂ, ಗಂಭೀರ ಹಾಗೂ ಘೋರ ಅಪರಾಧದ ಹಿನ್ನೆಲೆ ಹೊಂದಿರುವ ಪ್ರತಿಭಟನಾಕಾರರಿಗೆ ಈ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿ ಜೋಯ್‌ ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್‌ ಅವರಿದ್ದ ಪೀಠವು ಈ ಸ್ಪಷ್ಟನೆ ನೀಡಿದ್ದು, 'ಅಪರಾಧದ ಹಿನ್ನೆಲೆ' ಎಂದರೆ ಕೇವಲ ಘೋರ ಮತ್ತು ಗಂಭೀರ ಆರೋಪಗಳನ್ನು ಹೊತ್ತಿರುವವರು ಎಂದಷ್ಟೇ ಅರ್ಥೈಸಬೇಕಾಗುತ್ತದೆ. ದೆಹಲಿಯಲ್ಲಿ ಸಿಜಿಪಿ ನೇತೃತ್ವದಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆ ಸಂದರ್ಭದ ಹಿಂಸಾಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಮಾತನಾಡಿ, ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್‌ಗಳನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಆದರೆ ಗಂಭೀರ ಹಾಗೂ ಘೋರ ಕ್ರಿಮಿನಲ್‌ ಹಿನ್ನೆಲೆ ಎದುರಿಸುತ್ತಿರುವ 2,700 ಮಂದಿಯ ಪ್ರಕರಣಗಳನ್ನು ವಾಪಸ್‌ ಪಡೆಯುವುದಿಲ್ಲ ಎಂದು ಕೋರ್ಟ್‌ಗೆ ತಿಳಿಸಿದರು. ಹಿರಿಯ ವಕೀಲ ಅಭಿಷೇಕ್‌ ಸಿಂಘ್ವಿ ಅವರು ಸಣ್ಣಪುಟ್ಟ ಟ್ರಾಫಿಕ್‌ ಉಲ್ಲಂಘನೆ ಅಥವಾ ರಾಜಕೀಯಪ್ರೇರಿತ ಕೇಸುಗಳ ಕುರಿತು ಸ್ಪಷ್ಟನೆ ಕೋರಿದಾಗ, ಪೀಠವು ಸಣ್ಣ ಪ್ರಕರಣಗಳು ಗಂಭೀರ ಅಪರಾಧದ ಅಡಿಯಲ್ಲಿ ಬರುವುದಿಲ್ಲ ಎಂದು ಹಸನುಗೊಳಿಸಿತು. ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣ ಅವರು ಪ್ರತಿಭಟನೆ ವೇಳೆ ವಕೀಲರ ಮಕ್ಕಳ ಮೇಲೂ ಹಲ್ಲೆ ನಡೆದಿದೆ ಎಂದು ಗಮನಕ್ಕೆ ತಂದರು. ಘಟನೆಗೆ ಸಂಬಂಧಿಸಿದ 300ಕ್ಕೂ ಹೆಚ್ಚು ಆಘಾತಕಾರಿ ವಿಡಿಯೋಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದ್ದು, ಮೇಲಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಈ ಕುರಿತು ದೆಹಲಿ ಪೊಲೀಸ್‌ ಕಮಿಷನರ್‌ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

Category
ಕರಾವಳಿ ತರಂಗಿಣಿ