image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಹುಲ್ ‘ಎಟ್ಟಪ್ಪನ್’ ಹೇಳಿಕೆಗೆ ಡಿಎಂಕೆ ತಿರುಗೇಟು : ಕಾಂಗ್ರೆಸ್ ವಿರುದ್ಧ ದಯಾನಿಧಿ ಮಾರನ್ ವಾಗ್ದಾಳಿ

ರಾಹುಲ್ ‘ಎಟ್ಟಪ್ಪನ್’ ಹೇಳಿಕೆಗೆ ಡಿಎಂಕೆ ತಿರುಗೇಟು : ಕಾಂಗ್ರೆಸ್ ವಿರುದ್ಧ ದಯಾನಿಧಿ ಮಾರನ್ ವಾಗ್ದಾಳಿ

ಚೆನ್ನೈ : ಲೋಕಸಭೆಯ ಕ್ಷೇತ್ರಗಳ ಮರುವಿಂಗಡಣೆ ಮಸೂದೆಯನ್ನು ಬೆಂಬಲಿಸುವ ಮೂಲಕ ಕೇಂದ್ರ ಸರ್ಕಾರದ ನಡೆಗೆ ಸಾಥ್ ನೀಡುವುದು ತಮಿಳುನಾಡಿಗೆ ಮಾಡುವ ದ್ರೋಹ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಡಿಎಂಕೆ ತೀವ್ರವಾಗಿ ತಿರುಗೇಟು ನೀಡಿದೆ. ಸಂಸತ್ತಿನಲ್ಲಿ ಈ ಮಸೂದೆಯನ್ನು ಬೆಂಬಲಿಸುವ ಯಾವುದೇ ಪಕ್ಷವು 21ನೇ ಶತಮಾನದ 'ಎಟ್ಟಪ್ಪನ್' (ಐತಿಹಾಸಿಕವಾಗಿ ದ್ರೋಹಕ್ಕೆ ಹೆಸರಾದ ವ್ಯಕ್ತಿ) ಆಗಿರುತ್ತದೆ ಎಂಬ ರಾಹುಲ್ ಗಾಂಧಿ ಅವರ ವಾಗ್ದಾಳಿಯ ಬೆನ್ನಲ್ಲೇ, ಡಿಎಂಕೆ ಪಕ್ಷವು ಕಾಂಗ್ರೆಸ್‌ ಅನ್ನು "ಅಧಿಕಾರಕ್ಕಾಗಿ ನಂಬಿಕೆಯನ್ನು ಮಾರಾಟ ಮಾಡುವ ವಿಷಪೂರಿತ ಹಾವುಗಳು" ಎಂದು ಕಟುವಾಗಿ ಟೀಕಿಸಿದೆ.

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಡಿಎಂಕೆ ಬೆಂಬಲಿಸಬಹುದು ಎಂಬ ರಾಜಕೀಯ ವಲಯದ ಊಹಾಪೋಹಗಳ ನಡುವೆಯೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದರು. ಇದಕ್ಕೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿರುವ ಡಿಎಂಕೆಯ ಹಿರಿಯ ಸಂಸದ ದಯಾನಿಧಿ ಮಾರನ್, "ಕೇವಲ ಸಚಿವ ಸ್ಥಾನಗಳಿಗಾಗಿ ನಮ್ಮ ನಂಬಿಕೆಯನ್ನು ಮಾರಿಕೊಂಡವರು ಕಾಂಗ್ರೆಸ್‌ನವರು. ಅಧಿಕಾರವನ್ನು ಪಡೆಯಲು ನಂಬಿಕೆಯನ್ನೇ ಮಾರಾಟ ಮಾಡುವ ವಿಷಪೂರಿತ ಹಾವುಗಳು ಇವರು" ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ ಅವರನ್ನು ನೇರವಾಗಿ ಗುರಿಯಾಗಿಸಿ ದಾಳಿ ಮುಂದುವರಿಸಿದ ದಯಾನಿಧಿ ಮಾರನ್, "ತಮಿಳುನಾಡಿಗೆ ಬಂದು ಕಾವೇರಿ ನೀರಿನ ಹಕ್ಕುಗಳ ಕುರಿತು ಮೌನ ವಹಿಸುವವರೇ ನಿಜವಾದ ದ್ರೋಹಿಗಳು. ನೀಟ್ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸುವ ಬದಲು, ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಮಾತ್ರ ಮಾತನಾಡುವವರು ಹಾಗೂ ಬಿಜೆಪಿಯ ಕುದುರೆ ವ್ಯಾಪಾರವನ್ನು ಖಂಡಿಸಿ ಟಿವಿಕೆಯ ಅಸಹ್ಯಕರ ಕುದುರೆ ವ್ಯಾಪಾರವನ್ನು ನಿರ್ಲಕ್ಷಿಸುವವರೇ ನಿಜವಾದ ದ್ರೋಹಿಗಳು" ಎಂದು ಕಿಡಿಕಾರಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮಿತ್ರಪಕ್ಷಗಳಾಗಿ ಚುನಾವಣೆಯನ್ನು ಎದುರಿಸಿದ್ದರೂ ಮತ್ತು ರಾಹುಲ್ ಗಾಂಧಿ ನಾಯಕತ್ವವನ್ನು ಡಿಎಂಕೆ ಬೆಂಬಲಿಸುತ್ತಿದ್ದರೂ, ತಮಿಳುನಾಡಿನ ಇತ್ತೀಚಿನ ವಿಧಾನಸಭಾ ಚುನಾವಣಾ ಬೆಳವಣಿಗೆಗಳ ಬಳಿಕ ಉಭಯ ಪಕ್ಷಗಳ ನಡುವಿನ ಮೈತ್ರಿ ಮುರಿದುಬಿದ್ದು, ವಾಕ್ಸಮರ ತೀವ್ರಗೊಂಡಿದೆ.

Category
ಕರಾವಳಿ ತರಂಗಿಣಿ