ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹಾಗೂ ಅವರ ಪತ್ನಿ ಪಾಯಲ್ ಅಬ್ದುಲ್ಲಾ ಅವರ ಸುದೀರ್ಘ ವೈವಾಹಿಕ ವಿವಾದಕ್ಕೆ ಕೊನೆಗೂ ತೆರೆಬಿದ್ದಿದ್ದು, ಸುಪ್ರೀಂ ಕೋರ್ಟ್ ಅವರಿಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿದೆ. ಕಳೆದ 17 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಈ ದಂಪತಿಯು ಪರಸ್ಪರ ಸಮ್ಮತಿಯೊಂದಿಗೆ ತಮ್ಮ ವಿರುದ್ಧ ದಾಖಲಾಗಿದ್ದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಅಂತಿಮ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಹಾಗೂ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿದ ಹಿರಿಯ ವಕೀಲ ಕಪಿಲ್ ಸಿಬಲ್, ಓಮರ್ ಮತ್ತು ಪಾಯಲ್ ಇಬ್ಬರೂ ಪರಸ್ಪರ ಸಮ್ಮತಿಯಿಂದ ಪ್ರತ್ಯೇಕವಾಗಿ ವಾಸಿಸಲು ಹಾಗೂ ವ್ಯಾಜ್ಯಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು. ಇದರ ಆಧಾರದ ಮೇಲೆ ಪೀಠವು ದಂಪತಿಗೆ ಸಂವಿಧಾನದ ವಿಧಿ 142ರ ಅಡಿಯಲ್ಲಿ ವಿಚ್ಛೇದನ ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಿತು.
ವಿಚ್ಛೇದನದ ಆದೇಶದೊಂದಿಗೆ ಜೀವನಾಂಶದ ಮೊತ್ತವೂ ಸ್ಪಷ್ಟಗೊಂಡಿದ್ದು, ಕೋರ್ಟ್ ಆದೇಶದಂತೆ ಓಮರ್ ಅಬ್ದುಲ್ಲಾ ಅವರು ತಮ್ಮ ಪತ್ನಿ ಪಾಯಲ್ ಅವರಿಗೆ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಜೀವನಾಂಶ ಪಾವತಿಸಬೇಕಾಗಿದೆ. ಅಲ್ಲದೆ, ಮಗನ ಶಿಕ್ಷಣ ಮತ್ತು ನಿರ್ವಹಣೆಗಾಗಿ ಪ್ರತಿ ತಿಂಗಳು 60 ಸಾವಿರ ರೂಪಾಯಿ ನೀಡುವಂತೆ ಕೋರ್ಟ್ ಸೂಚಿಸಿದೆ. ದೆಹಲಿಯ ಪ್ರಸಿದ್ಧ ಒಬೆರಾಯ್ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಪರಿಚಯವಾಗಿದ್ದ ಓಮರ್ ಅಬ್ದುಲ್ಲಾ ಮತ್ತು ಪಾಯಲ್, ಸೆಪ್ಟೆಂಬರ್ 1994 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಭಿನ್ನಾಭಿಪ್ರಾಯಗಳು ತೀವ್ರಗೊಂಡು 2009 ರಿಂದ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ ಇವರು, 2011 ರಲ್ಲಿ ತಾವು ಬೇರ್ಪಡುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.
ಆರಂಭದಲ್ಲಿ ಓಮರ್ ಅಬ್ದುಲ್ಲಾ ಅವರು ಮಾನಸಿಕ ಕಿರುಕುಳದ ಆರೋಪದ ಮೇಲೆ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನ ಕೋರಿದ್ದರಾದರೂ, ಸೂಕ್ತ ಆಧಾರವಿಲ್ಲವೆಂದು ಅರ್ಜಿ ವಜಾಗೊಂಡಿತ್ತು. ನಂತರ ದೆಹಲಿ ಹೈಕೋರ್ಟ್ ಸಹ ಫ್ಯಾಮಿಲಿ ಕೋರ್ಟ್ ತೀರ್ಪನ್ನು ಎತ್ತಿಹಿಡಿದು, ಪತ್ನಿ ಹಾಗೂ ಮಗನಿಗೆ ಜೀವನಾಂಶ ಪಾವತಿಸುವಂತೆ ಆದೇಶಿಸಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ದಂಪತಿ ಪರಸ್ಪರ ಸಮ್ಮತಿಯಿಂದ ದಾವೆ ಹಿಂಪಡೆಯಲು ಒಪ್ಪಿದ್ದರಿಂದ ಈ ಸುದೀರ್ಘ ಕಾನೂನು ಹೋರಾಟಕ್ಕೆ ಪೂರ್ಣವಿರಾಮ ಬಿದ್ದಿದೆ.