image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೆರೆಯ ರಾಜ್ಯಗಳಿಗೆ ತಮಿಳುನಾಡು ಆಘಾತ: ಜಲ್ಲಿ, ಎಂ-ಸ್ಯಾಂಡ್ ಸಾಗಣೆ 3 ತಿಂಗಳು ಬಂದ್!

ನೆರೆಯ ರಾಜ್ಯಗಳಿಗೆ ತಮಿಳುನಾಡು ಆಘಾತ: ಜಲ್ಲಿ, ಎಂ-ಸ್ಯಾಂಡ್ ಸಾಗಣೆ 3 ತಿಂಗಳು ಬಂದ್!

ಚೆನ್ನೈ : ಕಾವೇರಿ ನೀರು ಹಂಚಿಕೆ ವಿವಾದದ ಬೆನ್ನಲ್ಲೇ ತಮಿಳುನಾಡು ಸರ್ಕಾರವು ನೆರೆಯ ರಾಜ್ಯಗಳಿಗೆ ಮತ್ತೊಂದು ಸವಾಲು ಒಡ್ಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರವು ತಮ್ಮ ರಾಜ್ಯದಿಂದ ಹೊರಕ್ಕೆ ರವಾನೆಯಾಗುವ ಪ್ರಮುಖ ನಿರ್ಮಾಣ ಸಾಮಗ್ರಿಗಳ ಸಾಗಣೆಯ ಮೇಲೆ ಮೂರು ತಿಂಗಳ ಕಾಲ ಕಠಿಣ ನಿಷೇಧ ವಿಧಿಸಿ ಅಧಿಕೃತ ಆದೇಶ ಹೊರಡಿಸಿದೆ. ಕಟ್ಟಡ ಹಾಗೂ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳಿಗೆ ಅತ್ಯಂತ ಅಗತ್ಯವಾಗಿರುವ ಕಲ್ಲು, ಎಂ-ಸ್ಯಾಂಡ್ ಮತ್ತು ಜಲ್ಲಿ ಕಲ್ಲುಗಳನ್ನು ಕರ್ನಾಟಕ, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಗೆ ಸಾಗಿಸುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಆದರೆ, ನೆರೆಯ ಕೇಂದ್ರಾಡಳಿತ ಪ್ರದೇಶವಾದ ಪುದುಚ್ಚೇರಿ ಮತ್ತು ಕಾರೈಕಾಲ್ ಭಾಗಗಳಿಗೆ ಮಾತ್ರ ಈ ನಿಷೇಧದಿಂದ ವಿಶೇಷ ವಿನಾಯಿತಿ ನೀಡಲಾಗಿದೆ.

ತಮಿಳುನಾಡಿನಲ್ಲಿ ನಗರೀಕರಣ ಹೆಚ್ಚುತ್ತಿದ್ದು, ಬೃಹತ್ ಮೂಲಸೌಕರ್ಯ ಹಾಗೂ ವಸತಿ ಯೋಜನೆಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಕ್ವಾರಿಗಳಿಂದ ಲಭ್ಯವಾಗುವ ಕಚ್ಚಾ ಸಾಮಗ್ರಿಗಳು ರಾಜ್ಯದ ಒಳಗಿನ ಬೇಡಿಕೆಯನ್ನು ಪೂರೈಸಲು ಸಾಲುತ್ತಿಲ್ಲ. ನೆರೆಯ ರಾಜ್ಯಗಳಿಗೆ ಭಾರಿ ಪ್ರಮಾಣದಲ್ಲಿ ಸಾಮಗ್ರಿಗಳು ಸರಬರಾಜಾಗುತ್ತಿರುವುದರಿಂದ ಸ್ಥಳೀಯವಾಗಿ ಕೃತಕ ಅಭಾವ ಸೃಷ್ಟಿಯಾಗಿ ಬೆಲೆಗಳು ಗಗನಕ್ಕೇರಿವೆ. ಆದ್ದರಿಂದ ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ತಾತ್ಕಾಲಿಕ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ವಿಜಯ್ ಸರ್ಕಾರ ಸ್ಪಷ್ಟಪಡಿಸಿದೆ.

ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ತಪಾಸಣೆ ನಡೆಸಲು ಸೂಚಿಸಲಾಗಿದೆ. ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ನಿಗಾ ವಹಿಸಲಾಗಿದ್ದು, ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜಲ್ಲಿ ಅಥವಾ ಎಂ-ಸ್ಯಾಂಡ್ ಸಾಗಿಸಲು ಯತ್ನಿಸಿದರೆ 'ತಮಿಳುನಾಡು ಅಕ್ರಮ ಗಣಿಗಾರಿಕೆ ಸಾರಿಗೆ ನಿರೋಧಕ ಕಾಯ್ದೆ'ಯಡಿ ವಾಹನಗಳನ್ನು ಜಪ್ತಿ ಮಾಡಿ, ಭಾರಿ ದಂಡದೊಂದಿಗೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.

ತಮಿಳುನಾಡಿನ ಈ ನಿರ್ಧಾರದಿಂದ ವಿಶೇಷವಾಗಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ವಲಯಕ್ಕೆ ಬಹುದೊಡ್ಡ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಹೊಸೂರು ಮತ್ತು ಕೃಷ್ಣಗಿರಿ ಭಾಗದಿಂದ ಬೆಂಗಳೂರಿಗೆ ಪ್ರತಿದಿನ ಪೂರೈಕೆಯಾಗುತ್ತಿದ್ದ ಸಾವಿರಾರು ಲಾರಿಗಳ ಸಂಚಾರ ಏಕಾಏಕಿ ನಿಂತಿರುವುದರಿಂದ ನಗರದಲ್ಲಿ ನಿರ್ಮಾಣ ವೆಚ್ಚ ಏರಿಕೆಯಾಗಿ, ಕಾಮಗಾರಿಗಳು ವಿಳಂಬವಾಗುವ ಸಾಧ್ಯತೆಯಿದೆ. ಇತ್ತ ಕೇರಳ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಹಾಗೂ ವಿಝಿಂಜಂ ಬಂದರು ಯೋಜನೆಗಳ ಮೇಲೆಯೂ ತೀವ್ರ ಪರಿಣಾಮ ಬೀರಲಿದ್ದು, ರಾಷ್ಟ್ರೀಯ ಯೋಜನೆಗಳ ಹಿತದೃಷ್ಟಿಯಿಂದ ತಮ್ಮ ರಾಜ್ಯಕ್ಕೆ ವಿನಾಯಿತಿ ನೀಡುವಂತೆ ಕೋರಿ ಕೇರಳ ಸಿಎಂ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಪತ್ರ ಬರೆದಿದ್ದಾರೆ.

Category
ಕರಾವಳಿ ತರಂಗಿಣಿ