ನವದೆಹಲಿ : ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಐಎಎಸ್ (IAS) ಅಧಿಕಾರಿಗಳ ಅಧಿಕೃತ ವಾಹನ ಬಳಕೆಗೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ. ಸರ್ಕಾರಿ ವಾಹನಗಳ ದುರುಪಯೋಗಕ್ಕೆ ತಡೆ ಹಾಕುವುದು ಮತ್ತು ಹೆಚ್ಚುವರಿ ಸಾರ್ವಜನಿಕ ವೆಚ್ಚವನ್ನು ಕಡಿತಗೊಳಿಸುವ ಉದ್ದೇಶದಿಂದ 'ಒಬ್ಬ ಅಧಿಕಾರಿಗೆ ಒಂದೇ ಕಾರು' ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ವಿಶೇಷವಾಗಿ ಹಿರಿಯ ಅಧಿಕಾರಿಗಳು ಸಚಿವಾಲಯ, ವಿವಿಧ ಇಲಾಖೆಗಳು, ಸಾರ್ವಜನಿಕ ವಲಯದ ಉದ್ಯಮಗಳು (PSU) ಅಥವಾ ಸ್ವಾಯತ್ತ ಸಂಸ್ಥೆಗಳ ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಹೀಗೆ ಒಂದಕ್ಕಿಂತ ಹೆಚ್ಚು ಇಲಾಖೆಗಳ ಉಸ್ತುವಾರಿ ಹೊಂದಿದ್ದರೂ, ಪ್ರತಿಯೊಂದು ಇಲಾಖೆಯಿಂದ ಪ್ರತ್ಯೇಕ ವಾಹನ ಪಡೆಯುವಂತಿಲ್ಲ. ಬದಲಿಗೆ, ಅಧಿಕಾರಿಗಳು ತಮ್ಮ ಮೂಲ ಹುದ್ದೆಯ ಇಲಾಖೆ ನೀಡುವ ಒಂದು ಸರ್ಕಾರಿ ಕಾರನ್ನು ಮಾತ್ರ ಬಳಸಬೇಕಾಗುತ್ತದೆ. ಎರಡೂ ಇಲಾಖೆಗಳ ಅಧಿಕೃತ ಕೆಲಸಗಳಿಗೆ ತೆರಳುವಾಗಲೂ ಈ ಮೂಲ ಇಲಾಖೆಯ ಕಾರನ್ನೇ ಬಳಸಬೇಕಾಗಿದ್ದು, ಸಿಬ್ಬಂದಿಗಳು ಸಹ ಅದೇ ವಾಹನದಲ್ಲಿ ಪ್ರಯಾಣಿಸಬೇಕಿದೆ.
ವಾಸ್ತವವಾಗಿ 'ಒಬ್ಬ ಅಧಿಕಾರಿಗೆ ಒಂದು ಕಾರು' ಎಂಬ ನಿಯಮವನ್ನು 2022ರಲ್ಲೇ ರೂಪಿಸಲಾಗಿದ್ದರೂ, ಅದು ಕಟ್ಟುನಿಟ್ಟಾಗಿ ಪಾಲನೆಯಾಗಿರಲಿಲ್ಲ. ಇದೀಗ ಕೆಲವು ಮಹತ್ವದ ಮಾರ್ಪಾಡುಗಳೊಂದಿಗೆ ಅದೇ ಆದೇಶವನ್ನು ಮರುಜಾರಿಗೊಳಿಸಲಾಗಿದೆ. ಅಧಿಕಾರಿಗಳು ಹೆಚ್ಚುವರಿಯಾಗಿ ಬಳಸುತ್ತಿದ್ದ ಕಾರುಗಳನ್ನು ಆಯಾ ಇಲಾಖೆಗಳು ತಕ್ಷಣವೇ ತಮ್ಮ ವಶಕ್ಕೆ ಪಡೆಯಬೇಕು ಮತ್ತು ಅವುಗಳನ್ನು ಸುಸ್ಥಿತಿಯಲ್ಲಿ ನಿರ್ವಹಿಸಬೇಕು ಎಂದು ನಿರ್ದೇಶಿಸಲಾಗಿದೆ. ಈ ಹೊಸ ನಿಯಮ ಜಾರಿಯಾಗುವುದರಿಂದ ಸರ್ಕಾರದ ಖಜಾನೆಗೆ ಬೀಳುತ್ತಿದ್ದ ಇಂಧನ ಹಾಗೂ ವಾಹನ ನಿರ್ವಹಣಾ ವೆಚ್ಚ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಜೊತೆಗೆ ಅಧಿಕಾರಿಗಳಿಂದ ವಾಪಸ್ ಪಡೆಯುವ ಕಾರುಗಳನ್ನು ಇಲಾಖೆಯ ಇತರ ಅಗತ್ಯ ಸಿಬ್ಬಂದಿಯ ಪ್ರಯಾಣಕ್ಕೆ ಬಳಸಬಹುದಾಗಿದ್ದು, ಖಾಸಗಿ ಬಾಡಿಗೆ ಕಾರುಗಳ ಮೇಲಿನ ಅವಲಂಬನೆ ಹಾಗೂ ವೆಚ್ಚವನ್ನು ಸಂಪೂರ್ಣವಾಗಿ ತಗ್ಗಿಸಲು ಸಾಧ್ಯವಾಗಲಿದೆ.