ಮುಂಬೈ : ಮೌಲ್ಯಮಾಪನ ವರ್ಷ 2026-27ರ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಕೊನೆಯ ದಿನಾಂಕ ಸಮೀಪಿಸುತ್ತಿದ್ದರೂ, ಲಕ್ಷಾಂತರ ತೆರಿಗೆದಾರರು ಕೊನೆಯ ಕ್ಷಣದವರೆಗೆ ಕಾಯುವ ಪ್ರವೃತ್ತಿ ಮುಂದುವರಿಸಿದ್ದಾರೆ. ಈಗಾಗಲೇ ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾಗಿದ್ದರೂ, ಅನೇಕ ಸಂಬಳದ ಉದ್ಯೋಗಿಗಳು ಹಾಗೂ ಪಿಂಚಣಿದಾರರು ಇನ್ನೂ ರಿಟರ್ನ್ ಸಲ್ಲಿಸಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಕೇಂದ್ರ ಸರ್ಕಾರ ಗಡುವನ್ನು ವಿಸ್ತರಿಸಬಹುದು ಎಂಬ ನಿರೀಕ್ಷೆಯಲ್ಲಿ ಕಾಯುವುದು ಅಪಾಯಕಾರಿ ಎಂದು ತೆರಿಗೆ ತಜ್ಞರು ಎಚ್ಚರಿಸಿದ್ದಾರೆ. ಈ ಬಾರಿ ಸರ್ಕಾರ ಗಡುವು ವಿಸ್ತರಿಸುವ ಸಾಧ್ಯತೆಗಳು ಅತ್ಯಂತ ಕಡಿಮೆ ಇದ್ದು, ತೆರಿಗೆದಾರರು ತಕ್ಷಣವೇ ತಮ್ಮ ರಿಟರ್ನ್ ಸಲ್ಲಿಸುವುದು ಸುರಕ್ಷಿತ.
ಕಳೆದ ವರ್ಷ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳಿಂದಾಗಿ ಗಡುವು ವಿಸ್ತರಿಸಲಾಗಿತ್ತು. ಆದರೆ ಈ ಬಾರಿ ಇ-ಫೈಲಿಂಗ್ ಪೋರ್ಟಲ್ ಸ್ಥಿರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸತ್ತಿನಲ್ಲಿ ನೀಡಲಾದ ಮಾಹಿತಿಯಂತೆ ಪೋರ್ಟಲ್‌ನ ಪ್ರತಿ ಗಂಟೆಯ ಕಾರ್ಯಕ್ಷಮತೆಯನ್ನು ವಿಶೇಷ ಡ್ಯಾಶ್‌ಬೋರ್ಡ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲದೆ, ಅಗತ್ಯ ನಮೂನೆಗಳನ್ನು (ITR Forms) ಮುಂಚಿತವಾಗಿಯೇ ಬಿಡುಗಡೆ ಮಾಡಿರುವುದರಿಂದ ಹಾಗೂ ತಾಂತ್ರಿಕ ತೊಂದರೆಗಳನ್ನು ತಕ್ಷಣವೇ ಪರಿಹರಿಸಲಾಗುತ್ತಿರುವುದರಿಂದ ಗಡುವು ಮುಂದೂಡುವ ಅಗತ್ಯವೇ ಇಲ್ಲದಂತಾಗಿದೆ.
ತೆರಿಗೆದಾರರಿಗೆ ಅವರ ಆದಾಯ ಹಾಗೂ ಆಡಿಟ್ ಸ್ವರೂಪದ ಆಧಾರದ ಮೇಲೆ ಬೇರೆ ಬೇರೆ ಗಡುವುಗಳನ್ನು ನಿಗದಿಪಡಿಸಲಾಗಿದೆ. ಸಂಬಳದ ಉದ್ಯೋಗಿಗಳು, ಪಿಂಚಣಿದಾರರು ಹಾಗೂ ತೆರಿಗೆ ಆಡಿಟ್‌ಗೆ ಒಳಪಡದ ವ್ಯಕ್ತಿಗಳು (ITR-1 ಮತ್ತು ITR-2) 2026ರ ಜುಲೈ 31ರೊಳಗೆ ರಿಟರ್ನ್ ಸಲ್ಲಿಸಬೇಕು. ವ್ಯವಹಾರ ಅಥವಾ ವೃತ್ತಿ ಆದಾಯವಿದ್ದು ಆಡಿಟ್‌ಗೆ ಒಳಪಡದವರು (ITR-3 ಮತ್ತು ITR-4) 2026ರ ಆಗಸ್ಟ್ 31ರೊಳಗೆ ಮತ್ತು ತೆರಿಗೆ ಆಡಿಟ್‌ಗೆ ಒಳಪಡುವ ಉದ್ಯಮಿಗಳು 2026ರ ಅಕ್ಟೋಬರ್ 31 ರೊಳಗೆ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ಟ್ರಾನ್ಸ್‌ಫರ್ ಪ್ರೈಸಿಂಗ್ ನಿಯಮ ಅನ್ವಯವಾಗುವ ತೆರಿಗೆದಾರರಿಗೆ 2026ರ ನವೆಂಬರ್ 30 ಕೊನೆಯ ದಿನಾಂಕವಾಗಿದೆ.
ಒಂದು ವೇಳೆ ನಿಗದಿತ ಗಡುವಿನೊಳಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗದಿದ್ದರೆ, ದಂಡದೊಂದಿಗೆ 2026ರ ಡಿಸೆಂಬರ್ 31 ರವರೆಗೆ ವಿಳಂಬಿತ (Belated) ರಿಟರ್ನ್ ಸಲ್ಲಿಸಲು ಅವಕಾಶವಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234F ಪ್ರಕಾರ ₹5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯವಿದ್ದವರಿಗೆ ₹5,000 ಹಾಗೂ ₹5 ಲಕ್ಷದವರೆಗಿನ ಆದಾಯವಿದ್ದವರಿಗೆ ₹1,000 ದಂಡ ವಿಧಿಸಲಾಗುತ್ತದೆ. ಜೊತೆಗೆ ಪಾವತಿಸಬೇಕಾದ ಬಾಕಿ ತೆರಿಗೆಯಿದ್ದರೆ, ನಿಗದಿತ ದಿನಾಂಕದಿಂದ ತೆರಿಗೆ ಪಾವತಿಸುವ ದಿನದವರೆಗೆ ಪ್ರತಿ ತಿಂಗಳು ಅಥವಾ ತಿಂಗಳ ಭಾಗಕ್ಕೆ ಶೇಕಡಾ 1ರಷ್ಟು ಬಡ್ಡಿ ಅನ್ವಯಿಸುತ್ತದೆ.
ಸಮಯಕ್ಕೆ ಸರಿಯಾಗಿ ಐಟಿಆರ್ ಸಲ್ಲಿಸದಿದ್ದರೆ ಬಂಡವಾಳ ನಷ್ಟವನ್ನು (Capital Loss) ಮುಂದಿನ ವರ್ಷಗಳಿಗೆ ವರ್ಗಾಯಿಸಿ ತೆರಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮುಖ ಸೌಲಭ್ಯ ಹಸ್ತಚ್ಯುತಿಯಾಗುತ್ತದೆ. ಅಲ್ಲದೆ ತೆರಿಗೆ ಮರುಪಾವತಿ (Refund) ಪಡೆಯುವುದರಲ್ಲೂ ವಿಳಂಬ ಉಂಟಾಗಬಹುದು. ಈಗಾಗಲೇ ಸಮಯಕ್ಕೆ ರಿಟರ್ನ್ ಸಲ್ಲಿಸಿದ್ದು, ನಂತರ ಯಾವುದೇ ತಪ್ಪು ಕಂಡುಬಂದರೆ ಅದನ್ನು ಸರಿಪಡಿಸಲು 2027ರ ಮಾರ್ಚ್ 31 ರವರೆಗೆ ಪರಿಷ್ಕೃತ (Revised) ರಿಟರ್ನ್ ಸಲ್ಲಿಸಲು ಸಮಯವಿದೆ. ಆದಾಗ್ಯೂ, ದಂಡ ಮತ್ತು ಬಡ್ಡಿಕಟ್ಟುವ ಸಂದರ್ಭ ತಪ್ಪಿಸಿಕೊಳ್ಳಲು ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಐಟಿಆರ್ ಸಲ್ಲಿಸುವುದು ಉತ್ತಮ.