ನವದೆಹಲಿ : ನವದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಅಕ್ರಮ ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಡೆಸಿದ ಪ್ರತಿಭಟನೆಯು ಮುಖ್ಯವಾಹಿನಿಯ ಮಾಧ್ಯಮದ ವರದಿಗಾರರೊಬ್ಬರಿಗೆ ಕಹಿ ಅನುಭವ. ಖಾಸಗಿ ಸುದ್ದಿವಾಹಿನಿಯ ವರದಿಗಾರ ಕಪಿಲ್ ರಾವತ್ ಅವರು ಪ್ರತಿಭಟನೆಯ ಲೈವ್ ಕವರೇಜ್ ನೀಡುತ್ತಿದ್ದ ವೇಳೆ, ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಗುಂಪೊಂದು ಅವರನ್ನು ಸುತ್ತುವರೆದು ತೀವ್ರ ಅಗೌರವ ತೋರಿತು. ಮಾಧ್ಯಮಗಳು ಸರ್ಕಾರದ ಪರವಾಗಿ ವರದಿ ಮಾಡುತ್ತಿವೆ ಎಂದು ಆರೋಪಿಸಿದ ಗುಂಪು, ಅವರನ್ನು "ಸರ್ಕಾರದೊಂದಿಗೆ ರಾಜಿಯಾದ ಮಾಧ್ಯಮ, ಸರ್ಕಾರದೊಂದಿಗೆ ರಾಜಿಯಾದ ಪತ್ರಕರ್ತ" ಎಂದು ಹೀಯಾಳಿಸಿತು.
ಈ ತೀವ್ರ ಮೂದಲಿಕೆಯ ನಡುವೆಯೂ ಅತ್ಯಂತ ಸಂಯಮ ಕಾಯ್ದುಕೊಂಡ ಕಪಿಲ್ ರಾವತ್, ತಮ್ಮ ವರದಿಗಾರಿಕೆಯ ಕರ್ತವ್ಯವನ್ನು ನಿಭಾಯಿಸಿದರು. ತಮ್ಮ ತಂದೆಯನ್ನು ಗುಂಪೊಂದು ಮೂದಲಿಸುತ್ತಿದ್ದ ವಿಡಿಯೋ ನೋಡಿ ಅವರ ಮಗಳು ಕಣ್ಣೀರಿಟ್ಟಾಗ, "ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುವಾಗ ಇವೆಲ್ಲವೂ ಸಾಮಾನ್ಯ" ಎಂದು ಮಗಳಿಗೆ ಸಮಾಧಾನ ಪಡಿಸಿದರು. ಅಸಹನೀಯ ವಾತಾವರಣದಲ್ಲೂ ಅವರು ತೋರಿದ ವೃತ್ತಿಪರತೆ ಮತ್ತು ಸಂಯಮದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆದವು.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ ಬೆನ್ನಲ್ಲೇ, ತಮ್ಮ ಕಾರ್ಯಕರ್ತರ ವರ್ತನೆಗೆ ಸಿಜೆಪಿ ಅಧಿಕೃತವಾಗಿ ಕ್ಷಮೆಯಾಚಿಸಿದೆ. ಕರ್ತವ್ಯನಿರತ ಪತ್ರಕರ್ತನ ಜೊತೆ ಈ ರೀತಿ ವರ್ತನೆ ಮಾಡಿದ್ದು ಸರಿಯಲ್ಲ ಎಂದು ಪಕ್ಷ ಒಪ್ಪಿಕೊಂಡಿದೆ. ಪ್ರತಿಭಟನಾಕಾರರ ಸಾಲಲ್ಲಿದ್ದ ಅನೇಕ ವಿದ್ಯಾರ್ಥಿಗಳು ಸಹ ತೀವ್ರ ಒತ್ತಡದ ನಡುವೆಯೂ ಕಪಿಲ್ ರಾವತ್ ಅವರು ತೋರಿದ ಶಾಂತಿ ಹಾಗೂ ಸಂಯಮದ ನಡವಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯಾವುದೇ ಘಟನೆಯನ್ನು ನಿಷ್ಪಕ್ಷಪಾತವಾಗಿ ವರದಿ ಮಾಡುವುದು ಪತ್ರಕರ್ತನ ಮೂಲ ಜವಾಬ್ದಾರಿ. ಆತನ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಅಥವಾ ಆತನ ಕಾಯಕವನ್ನು ಕೀಳಾಗಿ ಕಾಣುವುದು ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಭಿನ್ನಾಭಿಪ್ರಾಯಗಳಿದ್ದರೂ ಪರಸ್ಪರ ಗೌರವ ಮತ್ತು ಸಂಯಮವನ್ನು ಕಾಯ್ದುಕೊಳ್ಳುವುದು ದ್ವೇಷ ಹಾಗೂ ಅಪನಂಬಿಕೆಯನ್ನು ದೂರ ಮಾಡಲು ಇರುವ ಏಕೈಕ ಮಾರ್ಗವಾಗಿದೆ.