image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಅಮಿತ್ ಶಾ ಸ್ಪಷ್ಟನೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಅಮಿತ್ ಶಾ ಸ್ಪಷ್ಟನೆ

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ನಿರ್ಧಾರದ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ಸಚಿವ ಸ್ಥಾನಕ್ಕಿಂತ ದೇಶ, ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳ ಹಿತಾಸಕ್ತಿಯೇ ಅತ್ಯಂತ ಮುಖ್ಯ ಎಂಬುದನ್ನು ಪ್ರಧಾನ್ ಅವರ ರಾಜೀನಾಮೆ ಪ್ರತಿಬಿಂಬಿಸುತ್ತದೆ ಎಂದು ಶಾ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಈ ಕುರಿತು ಬರೆದುಕೊಂಡಿರುವ ಅಮಿತ್ ಶಾ, ಮೋದಿ ಸರ್ಕಾರವು ದೇಶದ ಯುವಕರ ಭಾವನೆಗಳನ್ನು ಗೌರವಿಸುತ್ತದೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದಿದ್ದಾರೆ. ಪರೀಕ್ಷಾ ಅಕ್ರಮಗಳಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ಶ್ಲಾಘಿಸಿದ ಅವರು, ಈ ಕ್ರಮಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ನ್ಯಾಯ ಒದಗಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಅಧಿಕಾರಾವಧಿಯಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿದ ಗೃಹ ಸಚಿವರು, ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಪರಿಣಾಮಕಾರಿ ಅನುಷ್ಠಾನ, ಮಾತೃಭಾಷೆಗಳಲ್ಲಿ ಪರೀಕ್ಷೆಗಳ ಆಯೋಜನೆ, ಪಿಎಂ ಶ್ರೀ ಶಾಲೆಗಳ ವಿಸ್ತರಣೆ, ಡಿಜಿಟಲ್ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯಲ್ಲಿ ಅವರು ತೋರಿದ ಶ್ರಮ ಗಮನಾರ್ಹವಾದದ್ದು ಎಂದಿದ್ದಾರೆ. ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಸಮಗ್ರ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿಸುವಲ್ಲಿ ಅವರ ಪ್ರಯತ್ನಗಳು ಪ್ರಮುಖವಾಗಿದ್ದವು ಎಂದು ಹೇಳಿದ್ದಾರೆ. ಇತ್ತ ತಮ್ಮ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಧರ್ಮೇಂದ್ರ ಪ್ರಧಾನ್, "ದೇಶದ ಯುವಕರು ಭ್ರಮೆಗಳ ವಿಷವರ್ತುಲಕ್ಕೆ ಬೀಳಲು ನಾನು ಬಿಡುವುದಿಲ್ಲ" ಎಂದು ಹೇಳಿದ್ದಾರೆ. ದೆಹಲಿಯ ಜಂತರ್ ಮಂತರ್ ಹಾಗೂ ದೇಶಾದ್ಯಂತ ಉಂಟಾಗಿರುವ ಪರಿಸ್ಥಿತಿಯನ್ನು ದೇಶವಿರೋಧಿ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದಿರುವ ಅವರು, ಭಾರತದ ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವೂ ಸುರಕ್ಷಿತವಾಗಿರಬೇಕು ಮತ್ತು ದೇಶದ ಏಕತೆ ಕಾಪಾಡಲ್ಪಡಬೇಕು ಎಂಬ ಉದ್ದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವುದಾಗಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ