ನವದೆಹಲಿ : 2012ರಲ್ಲಿ ಧರ್ಮಸ್ಥಳದ ಸಮೀಪ ನಡೆದ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಕೈಗೊಂಡ ರೀತಿಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಪ್ರಕರಣದಲ್ಲಿ ಆರೋಪಿ ಖುಲಾಸೆಗೊಂಡಿರುವ ಹಿನ್ನೆಲೆಯಲ್ಲಿ, ಮರು ತನಿಖೆಗೆ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಅನುಮತಿ ನೀಡುವ ಕುರಿತು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್‌ದೇವ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಸಿಬಿಐ ತನಿಖೆಯ ವೈಫಲ್ಯವನ್ನು ಪ್ರಶ್ನಿಸಿದ ನ್ಯಾಯಾಲಯ, "ಈ ಪ್ರಕರಣದಲ್ಲಿ ಸಿಬಿಐ ತನಿಖಾಧಿಕಾರಿ ಯಾವುದೇ ಸ್ವತಂತ್ರ ತನಿಖೆ ನಡೆಸದೆ, ಸ್ವತಃ ನ್ಯಾಯಾಧೀಶರಂತೆ ವರ್ತಿಸಿ ಹಿಂದೆ ಸಂಗ್ರಹಿಸಿದ್ದ ಪುರಾವೆಗಳನ್ನಷ್ಟೇ ಪರಿಶೀಲಿಸಿ ವರದಿ ನೀಡಿದ್ದಾರೆ" ಎಂದು ಕಟುವಾಗಿ ಟೀಕಿಸಿತು.
ತನಿಖಾಧಿಕಾರಿ ಅಪರಾಧ ನಡೆದ ಸ್ಥಳಕ್ಕೇ ಭೇಟಿ ನೀಡದಿರುವುದು ಹಾಗೂ ಪ್ರಕರಣ ತನಿಖೆ ನಡೆಸಿದ ಮೂರೂ ತನಿಖಾ ಸಂಸ್ಥೆಗಳಲ್ಲಿ (ರಾಜ್ಯ ಪೊಲೀಸ್, ಸಿಐಡಿ, ಸಿಬಿಐ) ಯಾವುದೂ ಸಂತ್ರಸ್ತೆಯ ತಾಯಿಯ ಹೇಳಿಕೆಯನ್ನು ದಾಖಲಿಸದಿರುವುದನ್ನು ಗಂಭೀರ ಲೋಪವೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಈ ಲೋಪಗಳನ್ನು ಬೆಟ್ಟು ಮಾಡಿದ ಕೋರ್ಟ್, "ಸಿಬಿಐ ಸಂಸ್ಥೆ ಈ ವಿಚಾರದಲ್ಲಿ ಅತ್ಯಂತ ಕೆಟ್ಟದಾಗಿ ಕಾಣುತ್ತಿದೆ" ಎಂದು ಆಕ್ರೋಶ ಹೊರಹಾಕಿತು. ಅರ್ಜಿದಾರರ ಪರ ಹಿರಿಯ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ. ನುಲಿ ಮತ್ತು ಶೇಖರ್ ಜಿ. ದೇವಾಸಾ ವಾದ ಮಂಡಿಸಿ, ಎಸ್‌ಐಟಿ ಮೂಲಕ ಹೊಸದಾಗಿ ತನಿಖೆ ನಡೆಸಬೇಕೆಂದು ಮನವಿ ಮಾಡಿದರು. ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವಿಶ್ಕರ್ ಸಿಂಘ್ವಿ, ರಾಜ್ಯದ ಪೊಲೀಸರು ಆರಂಭದಲ್ಲಿ ಒಂದು ವರ್ಷ ತನಿಖೆ ನಡೆಸಿದ ಬಳಿಕ ಸಿಐಡಿ ಹಾಗೂ ನಂತರ ಸಿಬಿಐಗೆ ಪ್ರಕರಣ ಹಸ್ತಾಂತರಿಸಲಾಗಿತ್ತು ಎಂದು ಕೋರ್ಟ್‌ಗೆ ವಿವರಿಸಿದರು. ಘಟನೆ ನಡೆದು 12 ವರ್ಷಗಳ ನಂತರ ಹೊಸ ಸಾಕ್ಷ್ಯಗಳನ್ನು ಹುಡುಕುವುದು ಕಷ್ಟ ಎಂಬ ಸಿಬಿಐ ವಕೀಲರ ವಾದವನ್ನು ಒಪ್ಪದ ಸುಪ್ರೀಂ ಕೋರ್ಟ್, ಸಂಸ್ಥೆಯ ಪಾತ್ರ ಸಮರ್ಥನೀಯವಲ್ಲ ಎಂದಿತು. ರಾಜ್ಯ ಸರ್ಕಾರವೇ ತನಿಖೆ ಕೈಗೊಳ್ಳಲು ಸಿದ್ಧವಿರುವಾಗ ಅವರ ಪ್ರಾಮಾಣಿಕತೆಯನ್ನು ಅನುಮಾನಿಸಬೇಕಿಲ್ಲ ಎಂದು ಹೇಳಿದ ನ್ಯಾಯಪೀಠ, ಎಸ್‌ಐಟಿ ಮರು ತನಿಖೆಗೆ ಆದೇಶಿಸುವ ಕುರಿತ ತನ್ನ ನಿರ್ಧಾರವನ್ನು ಕಾಯ್ದಿರಿಸಿದೆ.