image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಎಜಿ ವರದಿಯಲ್ಲಿ ಭ್ರಷ್ಟಾಚಾರ ಸಾಬೀತಾದರೆ ಯಾರನ್ನೂ ಬಿಡುವುದಿಲ್ಲ : ಸಿಎಂ ಸುವೇಂದು ಅಧಿಕಾರಿ

ಸಿಎಜಿ ವರದಿಯಲ್ಲಿ ಭ್ರಷ್ಟಾಚಾರ ಸಾಬೀತಾದರೆ ಯಾರನ್ನೂ ಬಿಡುವುದಿಲ್ಲ : ಸಿಎಂ ಸುವೇಂದು ಅಧಿಕಾರಿ

ಕೋಲ್ಕತ್ತ : ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸಿಎಜಿ (CAG) ಹಾಗೂ ಲೋಕಾಯುಕ್ತ ವರದಿಗಳಲ್ಲಿ ಭ್ರಷ್ಟಾಚಾರ ಸಾಬೀತಾದರೆ ಮಾಜಿ ಮುಖ್ಯಮಂತ್ರಿಯಾಗಲಿ ಅಥವಾ ಯಾವುದೇ ಸಚಿವರಾಗಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಬದಲಾದ ನಂತರ ಮೊದಲ ಬಾರಿಗೆ ಬುಧವಾರ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯವನ್ನು ಪ್ರಸ್ತಾಪಿಸಿದರು.

ಹಿಂದಿನ ಮಮತಾ ಬ್ಯಾನರ್ಜಿ ಸರ್ಕಾರದ ಅವಧಿಯಲ್ಲಿ ಕಡ್ಡಾಯವಾಗಿದ್ದರೂ ಸಿಎಜಿ ಮತ್ತು ಲೋಕಾಯುಕ್ತ ವರದಿಗಳನ್ನು ವರ್ಷಗಳ ಕಾಲ ವಿಧಾನಸಭೆಯಲ್ಲಿ ಮಂಡಿಸದೆ ನಿರ್ಲಕ್ಷಿಸಲಾಗಿತ್ತು ಎಂದು ಅವರು ಆರೋಪಿಸಿದರು. ಇದೇ ಜುಲೈ 25ರಂದು ವಿಧಾನಸಭೆಯಲ್ಲಿ ಸಿಎಜಿ ವರದಿ ಮಂಡಿಸಲು ನಿರ್ಧರಿಸಲಾಗಿದ್ದು, ನಂತರದ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ವರದಿಯಲ್ಲಿ ಭ್ರಷ್ಟಾಚಾರ ಸಾಬೀತಾದರೆ, ಎಷ್ಟೇ ಪ್ರಭಾವಿ ನಾಯಕರಾಗಿದ್ದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು ಎಂದು ಸಿಎಂ ಹೇಳಿದರು.

ಅಂಫಾನ್ ಚಂಡಮಾರುತದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಕಂತುಗಳಲ್ಲಿ ₹3,750 ಕೋಟಿ ಆರ್ಥಿಕ ನೆರವು ನೀಡಿದ್ದರೂ, ಅದರಲ್ಲಿ ಬೃಹತ್ ಮಟ್ಟದ ಭ್ರಷ್ಟಾಚಾರ ನಡೆದಿತ್ತು ಎಂದು ಸುವೇಂದು ವಾಗ್ದಾಳಿ ನಡೆಸಿದರು. ಕೋಲ್ಕತ್ತಾ ಹೈಕೋರ್ಟ್ ಆದೇಶದಂತೆ ನಡೆದ ವಿಶೇಷ ಸಿಎಜಿ ತನಿಖಾ ವರದಿಯನ್ನು ಮತ್ತು ಆರೋಪಿಗಳ ವಿರುದ್ಧದ ಕಾನೂನು ಶಿಫಾರಸುಗಳನ್ನು ಹಿಂದಿನ ಸರ್ಕಾರ ಸಾರ್ವಜನಿಕಗೊಳಿಸದೆ ಮುಚ್ಚಿಹಾಕಿತ್ತು ಎಂದು ಅವರು ದೂರಿದರು.

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಅನುಷ್ಠಾನದ ಕುರಿತು ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯ ವರದಿ ಬಂದ ನಂತರ ವಿಶೇಷ ಅಧಿವೇಶನ ಕರೆಯಲಾಗುವುದು ಎಂದು ಘೋಷಿಸಿದರು. ಇದರೊಂದಿಗೆ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಮತ್ತು ಮಕ್ಕಳ ರಕ್ಷಣಾ ಆಯೋಗ ಸೇರಿದಂತೆ ಹಿಂದಿನ ಸರ್ಕಾರದಲ್ಲಿ ನಿಷ್ಕ್ರಿಯಗೊಂಡಿದ್ದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಆಗಸ್ಟ್ 1ರಿಂದ ಸಂಪೂರ್ಣವಾಗಿ ಪುನರಾರಂಭಗೊಂಡು ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲಿವೆ ಎಂದು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ