image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಭೋಜಶಾಲೆ ಪ್ರಕರಣ : ಆದೇಶ ಅಕ್ಷರಶಃ ಪಾಲಿಸಲು ಸುಪ್ರೀಂ ಸೂಚನೆ

ಭೋಜಶಾಲೆ ಪ್ರಕರಣ : ಆದೇಶ ಅಕ್ಷರಶಃ ಪಾಲಿಸಲು ಸುಪ್ರೀಂ ಸೂಚನೆ

ಭೋಜಶಾಲಾ : ಭೋಜಶಾಲಾ-ಕಮಾಲ್ ಮೌಲಾ ಮಸೀದಿ ಸಂಕೀರ್ಣ ಪ್ರಕರಣದಲ್ಲಿ ತನ್ನ ಜುಲೈ 14ರ ಆದೇಶವನ್ನು ಅಕ್ಷರಶಃ ಜಾರಿಗೊಳಿಸುವಂತೆ ಕೇಂದ್ರ ಹಾಗೂ ಮಧ್ಯಪ್ರದೇಶ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಶುಕ್ರವಾರದ ನಮಾಝ್‌ಗಾಗಿ ಆಡಳಿತ ಮಂಡಳಿಯು ಗುರುತಿಸಿರುವ ಸ್ಥಳವು ಸಂಕೀರ್ಣದ ಪಕ್ಕದಲ್ಲಿರುವ ಬದಲು ಸುಮಾರು ಎರಡು ಕಿಲೋಮೀಟರ್ ದೂರದಲ್ಲಿದೆ ಎಂದು ಮುಸ್ಲಿಂ ಕಕ್ಷಿದಾರರು ಆರೋಪಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಈ ಸೂಚನೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಸ್ತುತ ಗುರುತಿಸಲಾದ ಸ್ಥಳವು ಸುಮಾರು 900 ಮೀಟರ್ ದೂರದಲ್ಲಿದೆ ಎಂದು ಸ್ಪಷ್ಟನೆ ನೀಡಿದರು. ಆದಾಗ್ಯೂ, ನ್ಯಾಯಾಲಯದ ನಿರ್ದೇಶನದಂತೆ ಮತ್ತೊಂದು ಸೂಕ್ತ ಸ್ಥಳವನ್ನು ಹುಡುಕಲು ಅಧಿಕಾರಿಗಳಿಗೆ ತಿಳಿಸುವುದಾಗಿ ಅವರು ಪೀಠಕ್ಕೆ ಭರವಸೆ ನೀಡಿದರು. ಇದೇ ವೇಳೆ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರು, ಜುಲೈ 14ರ ಆದೇಶದಲ್ಲಿ 'ಸಂಕೀರ್ಣಕ್ಕೆ ಹೊಂದಿಕೊಂಡಿರುವ' ಸ್ಥಳ ಎಂದೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎಂಬುದನ್ನು ಮೆಹ್ತಾ ಅವರಿಗೆ ನೆನಪಿಸಿದರು.

ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಈ ಸಂಕೀರ್ಣವನ್ನು ಹಿಂದೂ ದೇವತೆ ಸರಸ್ವತಿಯ ದೇವಾಲಯವೆಂದು ಎತ್ತಿಹಿಡಿದು, ಮಂಗಳವಾರ ಹಿಂದೂಗಳಿಗೆ ಮತ್ತು ಶುಕ್ರವಾರ ಮುಸ್ಲಿಮರಿಗೆ ಪ್ರಾರ್ಥನೆಗೆ ಅವಕಾಶ ನೀಡಿದ್ದ ಎಎಸ್‍ಐನ 2003ರ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಸಂಕೀರ್ಣದ ಒಳಗೆ ಪ್ರಾರ್ಥನೆ ಸಲ್ಲಿಸುವ ಹಳೆಯ ಯಥಾಸ್ಥಿತಿಯನ್ನು ಮರುಸ್ಥಾಪಿಸಲು ನಿರಾಕರಿಸಿತ್ತು. ಆದರೆ, ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟು, ಪ್ರತಿ ಶುಕ್ರವಾರ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ನಮಾಝ್‌ಗಾಗಿ ಸಂಕೀರ್ಣಕ್ಕೆ ಹೊಂದಿಕೊಂಡಿರುವ ತೆರೆದ ಸ್ಥಳವನ್ನು ಒದಗಿಸುವಂತೆ ತಾತ್ಕಾಲಿಕ ವ್ಯವಸ್ಥೆಗೆ ಆದೇಶಿಸಿತ್ತು. ಅಲ್ಲದೆ, ನ್ಯಾಯಾಲಯದ ಅನುಮತಿಯಿಲ್ಲದೆ ಸಂಕೀರ್ಣದಲ್ಲಿ ಯಾವುದೇ ರಚನಾತ್ಮಕ ಬದಲಾವಣೆ ಮಾಡಬಾರದು ಎಂದೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದೆ.

Category
ಕರಾವಳಿ ತರಂಗಿಣಿ