image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ನೀಟ್ ಅಕ್ರಮ : 'ಯುವಕರನ್ನು ಪ್ರಚೋದಿಸಬೇಡಿ, ಸರಿದಾರಿಗೆ ತನ್ನಿ' - ಎನ್‌ಡಿಎ ಸಂಸದರಿಗೆ ಪ್ರಧಾನಿ ಮೋದಿ ಕರೆ

ನೀಟ್ ಅಕ್ರಮ : 'ಯುವಕರನ್ನು ಪ್ರಚೋದಿಸಬೇಡಿ, ಸರಿದಾರಿಗೆ ತನ್ನಿ' - ಎನ್‌ಡಿಎ ಸಂಸದರಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ : ದೆಹಲಿಯಲ್ಲಿ ನೀಟ್-ಯುಜಿ (NEET-UG) ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಯ ಬೆನ್ನಲ್ಲೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎನ್‌ಡಿಎ (NDA) ಸಂಸದರಿಗೆ ಮಹತ್ವದ ಸಂದೇಶ ನೀಡಿದ್ದಾರೆ. ಸಂಸತ್ತಿನ ಮಳೆಗಾಲದ ಅಧಿವೇಶನದ ಅಂಗವಾಗಿ ಸಂಸತ್ ಗ್ರಂಥಾಲಯ ಭವನದ ಜಿ.ಎಂ.ಸಿ. ಬಾಲಯೋಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಜನರನ್ನು ಭ್ರಮೆಗೆ ತಳ್ಳದೆ ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುವಂತೆ ತಮ್ಮ ಮೈತ್ರಿಕೂಟದ ನಾಯಕರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಪ್ರಧಾನಿಯವರು, “ಯುವಕರನ್ನು ಪ್ರಚೋದಿಸುವುದು ಮತ್ತು ತಪ್ಪು ದಾರಿಗೆ ಎಳೆಯುವುದು ಸುಲಭ. ಆದರೆ ಅವರನ್ನು ಮತ್ತೆ ಸರಿಯಾದ ಮಾರ್ಗಕ್ಕೆ ತರುವುದು ಅತ್ಯಂತ ಸವಾಲಿನ ಕೆಲಸ. ವಿದ್ಯಾರ್ಥಿಗಳನ್ನು ಮತ್ತೆ ಸರಿದಾರಿಗೆ ತಂದು ಅವರಲ್ಲಿ ವಿಶ್ವಾಸ ಮೂಡಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಹೇಳಿದರು. ಕೆಲವರು ಸ್ವಾರ್ಥ ಹಿತಾಸಕ್ತಿಗಾಗಿ ಯುವಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಪ್ರಧಾನಿ, ಪರೀಕ್ಷಾ ಅಕ್ರಮ ಎಸಗಿದ ತಪ್ಪಿತಸ್ಥರ ವಿರುದ್ಧ ಸರ್ಕಾರ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಿದೆ ಮತ್ತು ಯುವಜನರ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗದಂತೆ ಸೂಕ್ತ ನ್ಯಾಯ ಒದಗಿಸಲಿದೆ ಎಂದು ಸಂಸದರು ವಿದ್ಯಾರ್ಥಿಗಳಿಗೆ ಭರವಸೆ ನೀಡಬೇಕು ಎಂದು ಸೂಚಿಸಿದರು.

Category
ಕರಾವಳಿ ತರಂಗಿಣಿ