image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಜೆಪಿ ಪ್ರತಿಭಟನೆಯಲ್ಲಿ ಅರಾಜಕತೆಯನ್ನು ಪ್ರಚೋದಿಸುವಂತಹ ಹಾಗೂ ವಿವಾದಾತ್ಮಕ ಘೋಷಣೆಗಳ ಕೂಗು

ಸಿಜೆಪಿ ಪ್ರತಿಭಟನೆಯಲ್ಲಿ ಅರಾಜಕತೆಯನ್ನು ಪ್ರಚೋದಿಸುವಂತಹ ಹಾಗೂ ವಿವಾದಾತ್ಮಕ ಘೋಷಣೆಗಳ ಕೂಗು

ನವದೆಹಲಿ : ​ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳನ್ನು ಖಂಡಿಸಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಚಲೋ ಸಂಸತ್’ ಪ್ರತಿಭಟನಾ ರ‍್ಯಾಲಿ ತೀವ್ರ ಸ್ವರೂಪ ಪಡೆದುಕೊಂಡು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಜಂತರ್ ಮಂತರ್‌ನಿಂದ ಸಂಸತ್ ಭವನದತ್ತ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸಬೇಕು ಮತ್ತು ಪರೀಕ್ಷಾ ಅಕ್ರಮಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.  

​ಆದರೆ, ಪ್ರತಿಭಟನೆಯ ವೇಳೆ ಕೇಳಿಬಂದ ಕೆಲವು ಅರಾಜಕತೆಯನ್ನು ಪ್ರಚೋದಿಸುವಂತಹ ಹಾಗೂ ವಿವಾದಾತ್ಮಕ ಘೋಷಣೆಗಳು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ನೆರೆ ದೇಶಗಳಾದ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯನ್ನು ಉಲ್ಲೇಖಿಸಿದ ಪ್ರತಿಭಟನಾಕಾರರು, ಭಾರತದಲ್ಲೂ ಅಂತಹದ್ದೇ ಸ್ಥಿತಿ ನಿರ್ಮಿಸುವುದಾಗಿ ಹಾಗೂ ಸಂಸತ್ ಭವನವನ್ನೇ ಕೆಡವುದಾಗಿ ಕೂಗಿದ ಉಗ್ರ ಘೋಷಣೆಗಳು ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳನ್ನು ಆತಂಕಕ್ಕೆ ಈಡುಮಾಡಿದೆ.  

​ಪ್ರತಿಭಟನಾ ನಿರತರು ಸಂಸತ್ ಭವನದತ್ತ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ಕೈಮೀರಿದ್ದು, ದೆಹಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡು ಜನಸಂದಣಿಯನ್ನು ಚದುರಿಸಲು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು. ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೇ ವಿಚಾರವಾಗಿ ಪರಿಸರವಾದಿ ಸೋನಮ್ ವಾಂಗ್‌ಚುಕ್ ನಡೆಸುತ್ತಿದ್ದ 20 ದಿನಗಳ ಉಪವಾಸ ಸತ್ಯಾಗ್ರಹದ ನಂತರ ಅವರ ಆರೋಗ್ಯ ಹದಗೆಟ್ಟಿತ್ತು. ಇದರ ಬೆನ್ನಲ್ಲೇ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು. ಆದರೆ, ರ‍್ಯಾಲಿ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಸರ್ಕಾರದಿಂದ ಮಾತುಕತೆಯ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಅಭಿಜಿತ್ ದೀಪ್ಕೆ ತಮ್ಮ ಉಪವಾಸವನ್ನು ಹಿಂತೆಗೆದುಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ