ಕೇರಳಮ್ : ಕೇರಳದ ವಿಝಿಂಜಂ ಕಡಲತೀರದಲ್ಲಿ ಸಮುದ್ರದಿಂದ ತೇಲಿಬಂದ ಸುಮಾರು 150 ಪಾಲಿಪ್ರೊಪಿಲೀನ್ ಚೀಲಗಳಿಗಾಗಿ ಸ್ಥಳೀಯ ಮೀನುಗಾರರು ಮತ್ತು ಕಂಪನಿಯ ಪ್ರತಿನಿಧಿಗಳ ನಡುವೆ ದೊಡ್ಡ ಹೈಡ್ರಾಮಾವೇ ಸೃಷ್ಟಿಯಾಗಿದೆ. ಕಷ್ಟಪಟ್ಟು ಚೀಲಗಳನ್ನು ದಡಕ್ಕೆ ತಂದ ತಮಗೆ ಸೂಕ್ತ ಕೂಲಿ ಹಾಗೂ ನಷ್ಟಪರಿಹಾರ ನೀಡಬೇಕು ಎಂದು ಆಗ್ರಹಿಸಿ ಮೀನುಗಾರರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಿಝಿಂಜಂ ತೀರದಿಂದ ಸುಮಾರು 32 ರಿಂದ 50 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಿದ್ದಾಗ ಈ ಚೀಲಗಳು ನೀರಿನ ಮೇಲೆ ತೇಲುತ್ತಿರುವುದು ಕಂಡುಬಂದಿದೆ. ಮೀನುಗಾರರು ತಮ್ಮ ದೈನಂದಿನ ಮೀನುಗಾರಿಕೆಯನ್ನು ಬದಿಗಿಟ್ಟು, ತಲಾ 25 ಕೆಜಿ ತೂಕವಿರುವ ಸುಮಾರು 150 ಚೀಲಗಳನ್ನು ಅತ್ಯಂತ ಕಷ್ಟಪಟ್ಟು ತಮ್ಮ ದೋಣಿಗಳ ಮೂಲಕ ದಡಕ್ಕೆ ತೆಗೆದುಕೊಂಡು ಬಂದಿದ್ದಾರೆ. ಯುಎಇಯಲ್ಲಿ ತಯಾರಾದ ಪಾಲಿಪ್ರೊಪಿಲೀನ್ ಹೊಂದಿರುವ ಈ ಚೀಲಗಳ ಮೇಲೆ ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿಯನ್ನು ಬರೆಯಲಾಗಿದೆ.
ಈ ಚೀಲಗಳ ಹಿನ್ನೆಲೆಯನ್ನು ನೋಡುವುದಾದರೆ, ಸುಮಾರು ಒಂದು ವರ್ಷದ ಹಿಂದೆ ಕೊಚ್ಚಿ-ಆಲಪ್ಪುಳ ಕಡಲಿನಲ್ಲಿ 'MSC ಎಲ್ಸಾ 3' ಹೆಸರಿನ ಸರಕು ಹಡಗು ಮುಳುಗಡೆಯಾಗಿತ್ತು. ಈ ಶಿಪ್‌ನಿಂದ ಬಿದ್ದಿದ್ದ ಕಂಟೈನರ್‌ಗಳು ಸಮುದ್ರದಲ್ಲಿ ತೇಲಾಡುತ್ತಿದ್ದವು. ಈಗ ಆ ಕಂಟೈನರ್‌ಗಳು ತುಕ್ಕು ಹಿಡಿದು ಒಡೆದಿದ್ದು, ಒಳಗಿದ್ದ ಪಾಲಿಪ್ರೊಪಿಲೀನ್ ಚೀಲಗಳು ನೀರಿನ ಮೇಲೆ ತೇಲಾಡುತ್ತಾ ದಡದತ್ತ ಬಂದಿವೆ ಎಂದು ಹೇಳಲಾಗುತ್ತಿದೆ. ಪಾಲಿಪ್ರೊಪಿಲೀನ್ ಚೀಲಗಳು ದಡಕ್ಕೆ ಬಂದಿರುವ ವಿಷಯ ತಿಳಿಯುತ್ತಿದ್ದಂತೆ, ಅವುಗಳ ಮಾಲೀಕತ್ವ ಹೊಂದಿದ ಕಂಪನಿಯ ಪ್ರತಿನಿಧಿಗಳು ಆಗಮಿಸಿ ವಾಹನಗಳಲ್ಲಿ ತುಂಬಿಸಿಕೊಂಡು ಹೋಗಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಮೀನುಗಾರರು ಅವರನ್ನು ತಡೆದು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಾಹನಗಳಲ್ಲಿರಿಸಲಾಗಿದ್ದ ಚೀಲಗಳನ್ನು ಕೆಳಗೆ ಇಳಿಸಿ ಪ್ರತಿಭಟನೆ ನಡೆಸಿದ್ದಾರೆ.
ಮೀನುಗಾರರು ತಮ್ಮ ಮೀನುಗಾರಿಕಾ ಕಾಯಕವನ್ನು ಬಿಟ್ಟು, ಅಷ್ಟು ದೂರದಿಂದ ಈ ಚೀಲಗಳನ್ನು ದಡಕ್ಕೆ ತಂದಿರುವುದಕ್ಕೆ ತಮಗೆ ಸೂಕ್ತ ಕೂಲಿ ಅಥವಾ ನಷ್ಟಪರಿಹಾರವನ್ನು ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ಕಡಲತೀರಕ್ಕೆ ಬಂದು ಬಿದ್ದಿದ್ದ ಪ್ಲಾಸ್ಟಿಕ್ ಹರಳುಗಳನ್ನು ಜರಡಿ ಹಿಡಿದು ತೆಗೆಯಲು ಕಂಪನಿಯವರು ಸಂಬಳ ಕೊಟ್ಟು ಜನರನ್ನು ನೇಮಿಸಿದ್ದರು. ಆದರೆ ದಡದಿಂದ ಪ್ಲಾಸ್ಟಿಕ್ ಹರಳುಗಳನ್ನು ಸಂಗ್ರಹಿಸಲು ನೇಮಕಗೊಂಡಿದ್ದ ಕಂಪನಿಯ ಗುತ್ತಿಗೆ ಕಳೆದ ಮಾರ್ಚ್‌ನಲ್ಲೇ ಮುಗಿದಿರುವುದರಿಂದ, ತಮಗೆ ಈಗ ನಷ್ಟಪರಿಹಾರ ನೀಡಲೇಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ಯಕ್ಕೆ ಈ ತೀರದಲ್ಲಿ ಪ್ರತಿಭಟನೆ ನಡೆದಿದ್ದರೂ ಯಾವುದೇ ಅಧಿಕೃತ ಪ್ರಕರಣ ದಾಖಲಾಗಿಲ್ಲ ಎಂದು ವಿಝಿಂಜಂ ಕರಾವಳಿ ಪೊಲೀಸರು ಮಾಹಿತಿ ನೀಡಿದ್ದಾರೆ.