image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸೋನಮ್ ವಾಂಗ್ಚುಕ್ ವಿಚಾರ: ರಾಹುಲ್ ಗಾಂಧಿಗೆ ಎನ್‌ಡಿಎ ತಿರುಗೇಟು

ಸೋನಮ್ ವಾಂಗ್ಚುಕ್ ವಿಚಾರ: ರಾಹುಲ್ ಗಾಂಧಿಗೆ ಎನ್‌ಡಿಎ ತಿರುಗೇಟು

ನವದೆಹಲಿ : ಪ್ರತಿಭಟನಾ ನಿರತ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿರುವ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಎನ್‌ಡಿಎ ಒಕ್ಕೂಟದ ನಾಯಕರು ತೀವ್ರ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ ನಿಜವಾಗಿಯೂ ವಾಂಗ್ಚುಕ್ ಬಗ್ಗೆ ಕಾಳಜಿ ಇದ್ದಿದ್ದರೆ, ತಮ್ಮ ವಿದೇಶಿ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಬಂದು ಅವರನ್ನು ಭೇಟಿಯಾಗಬೇಕಿತ್ತು ಎಂದು ಆಡಳಿತ ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಂತರ್ ಮಂತರ್‌ನಲ್ಲಿ 20 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ ನಂತರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಸತ್ಯ ಮತ್ತು ಹಿಂಸೆಯ ರಾಜಕಾರಣ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ರಾಹುಲ್ ಗಾಂಧಿ ವಂಶಪಾರಂಪರ್ಯ ರಾಜಕಾರಣದ ಸಂಕೇತವಾಗಿದ್ದು, ನೆಹರೂ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರಿಗೂ ರಾಜಕೀಯ ಮಾಡುವ ಹಕ್ಕಿಲ್ಲ ಎಂದು ಭಾವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂದುಳಿದ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಪ್ರಧಾನಿಯಾಗಿರುವುದನ್ನು ಜೀರ್ಣಿಸಿಕೊಳ್ಳಲಾಗದೆ ಅವರು ವಿದೇಶಗಳಲ್ಲಿ ಭಾರತದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ಮಾತನಾಡಿ, ವಾಂಗ್ಚುಕ್ ಉಪವಾಸದಲ್ಲಿದ್ದಾಗ ರಾಹುಲ್ ಗಾಂಧಿ ಯುರೋಪ್‌ನಲ್ಲಿದ್ದರು, ಭಾರತಕ್ಕೆ ಮರಳಿದ ನಂತರವೂ ಉತ್ತರಾಖಂಡಕ್ಕೆ ಹೋದರು. ಈಗ ಜನರು ಪ್ರಶ್ನಿಸುತ್ತಿರುವುದರಿಂದ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಟ್ವೀಟ್ ಮಾಡುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ, ಹೈಕೋರ್ಟ್ ನಿರ್ದೇಶನದಂತೆ ವಾಂಗ್ಚುಕ್ ಆರೋಗ್ಯದ ಹಿತದೃಷ್ಟಿಯಿಂದ ಮಾತ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೇ ಹೊರತು ಬೇರೇನೂ ಅಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಯು ಶಾಸಕ ಶ್ಯಾಮ್ ರಜಾಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಾ, 1974ರ ಸಾಲು ಹಾಗೂ ಪಂಜಾಬ್‌ನ ಆಪರೇಷನ್ ಬ್ಲೂ ಸ್ಟಾರ್‌ಗಳನ್ನು ನೆನಪಿಸಿ, ಹಿಂಸೆಯ ಮೂಲಕ ಆಡಳಿತ ನಡೆಸಿದ ಕಾಂಗ್ರೆಸ್ ನಾಯಕರು ಈಗ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪಾಲಿಸುವವರ ಮೇಲೆ ಹಿಂಸೆಯ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಎನ್‌ಡಿಎ ನಾಯಕರ ಈ ವಾಗ್ದಾಳಿಗೆ ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಮ್ ವಾಂಗ್ಚುಕ್ ಇಬ್ಬರೂ ವಿದ್ಯಾರ್ಥಿಗಳಿಗಾಗಿಯೇ ಹೋರಾಡುತ್ತಿದ್ದು, ವಾಂಗ್ಚುಕ್ ಅವರನ್ನು ಬಲವಂತವಾಗಿ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ. ಬಿಜೆಪಿಗೆ ವಾಂಗ್ಚುಕ್ ಅವರ ಮೇಲೆ ಅಷ್ಟೊಂದು ಸಹಾನುಭೂತಿ ಇದ್ದರೆ, ಅವರೊಂದಿಗೆ ಮಾತುಕತೆ ನಡೆಸಲಿ ಮತ್ತು ನೀಟ್ ಪೇಪರ್ ಸೋರಿಕೆ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದ್ದಾರೆ.

Category
ಕರಾವಳಿ ತರಂಗಿಣಿ