ಜಮ್ಮು-ಕಾಶ್ಮೀರ : ಇಲ್ಲಿನ ಪಿರ್ ಪಂಜಾಲ್ ಪ್ರದೇಶದಲ್ಲಿ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಸಂಭವಿಸಿದ ಭೀಕರ ಮೇಘಸ್ಫೋಟ ಹಾಗೂ ಹಠಾತ್ ಪ್ರವಾಹಕ್ಕೆ ಕನಿಷ್ಠ 17 ಜನರು ಬಲಿಯಾಗಿದ್ದಾರೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆಗಳಲ್ಲಿ ಭಾರಿ ಭೂಕುಸಿತ ಉಂಟಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ದುರಂತದ ತೀವ್ರತೆ ಹೆಚ್ಚಾಗಿರುವುದರಿಂದ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಆತಂಕ ಎದುರಾಗಿದೆ. ವಿಶೇಷವಾಗಿ ಪೂಂಚ್ ಜಿಲ್ಲೆಯ ಸುರಂಕೋಟ್ ತಹಸಿಲ್‌ನಲ್ಲಿ ಮಳೆಯ ಆರ್ಭಟಕ್ಕೆ ಭಾರಿ ವಿನಾಶ ಸಂಭವಿಸಿದೆ. ಸುರಂಕೋಟ್‌ನ ಲೋವರ್ ಮುರ್ರಾ ಗ್ರಾಮದಲ್ಲಿ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತಕ್ಕೆ ಮನೆಯೊಂದು ಸಂಪೂರ್ಣವಾಗಿ ಮಣ್ಣಿನಡಿ ಹೂತುಹೋಗಿದ್ದು, ಒಂದೇ ಕುಟುಂಬದ ಎಂಟು ಸದಸ್ಯರು ಸಾವನ್ನಪ್ಪಿದ್ದಾರೆ. ಸದ್ಯ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 60 ವರ್ಷದ ವೃದ್ಧೆ ಮತ್ತು 2 ವರ್ಷದ ಮಗು ಸೇರಿದಂತೆ ಒಟ್ಟು 16 ಶವಗಳನ್ನು ಹೊರತೆಗೆದಿದ್ದು, ನಾಪತ್ತೆಯಾದ ಉಳಿದವರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಶವಗಳೂ ಪತ್ತೆಯಾಗಿದ್ದು, ಪರಿಸ್ಥಿತಿ ಅತ್ಯಂತ ಭೀಕರವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜೌರಿಯಲ್ಲಿ 103 ಮಿಮೀ ಹಾಗೂ ಪೂಂಚ್‌ನಲ್ಲಿ 77 ಮಿಮೀ ದಾಖಲೆ ಮಳೆಯಾಗಿದೆ. ರಸ್ತೆಗಳು ಹಾನಿಗೊಳಗಾಗಿರುವುದು ಮತ್ತು ಸತತವಾಗಿ ಮಳೆ ಸುರಿಯುತ್ತಿರುವುದು ರಕ್ಷಣಾ ಕಾರ್ಯಕ್ಕೆ ತೀವ್ರ ಅಡ್ಡಿಪಡಿಸಿದೆ. ಇತ್ತೀಚಿನ ಈ ಭೀಕರ ಪರಿಸ್ಥಿತಿಯಿಂದಾಗಿ, ರಾಜ್ಯ ಸ್ಥಾನಮಾನದ ಪ್ರತಿಭಟನೆಗಾಗಿ ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಮ್ಮ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಜಮ್ಮುವಿಗೆ ಮರಳಿದ್ದಾರೆ. ಮತ್ತೊಂದೆಡೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮಳೆ ಪೀಡಿತ ಜಿಲ್ಲೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ಪರಿಹಾರ ಮತ್ತು ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.