ನವದೆಹಲಿ : ಇಲ್ಲಿನ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ವೈದ್ಯಕೀಯ ಆರೈಕೆ ವಿಚಾರದಲ್ಲಿ ತಕ್ಷಣದ ಹಸ್ತಕ್ಷೇಪ ಮಾಡಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ವಾಂಗ್‌ಚುಕ್ ಅವರನ್ನು ಸದ್ಯ ಇರುವ ಸರ್ಕಾರಿ ಆಸ್ಪತ್ರೆಯಿಂದ ಮೇದಾಂತ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ಕೋರಿ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಹೈಕೋರ್ಟ್‌ಗೆ ತುರ್ತು ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಏಕಸದಸ್ಯ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಾಗ, ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸುವ ಅಥವಾ ಯಾವುದೇ ಮಧ್ಯಂತರ ಆದೇಶ ನೀಡುವ ತುರ್ತು ಅಗತ್ಯವಿಲ್ಲ ಎಂದು ಹೇಳಿ, ಅರ್ಜಿಯ ಮುಂದಿನ ವಿವರವಾದ ವಿಚಾರಣೆಯನ್ನು ಜುಲೈ 24 ಕ್ಕೆ ನಿಗದಿಪಡಿಸಿತು.
ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ಸಫ್ದರ್ಜಂಗ್ ಆಸ್ಪತ್ರೆಯ ತಜ್ಞ ವೈದ್ಯರು ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರಿಗೆ ಸಮಸ್ಯೆಯಾಗುವ ರೀತಿಯಲ್ಲಿ ಯಾವುದೇ ಬಲಪ್ರಯೋಗ ಮಾಡಲಾಗುತ್ತಿದೆ ಎಂದು ಹೇಳಲು ಬರುವುದಿಲ್ಲ. ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದು ಅವರ ಜೀವ ರಕ್ಷಣೆಯ ಉದ್ದೇಶದಿಂದಾಗಿಯೇ ಹೊರತು, ಅದನ್ನು ಬಲಪ್ರಯೋಗದ ಬಂಧನ ಎನ್ನಲಾಗದು ಎಂದರು. ಅಲ್ಲದೆ, ವಾಂಗ್‌ಚುಕ್ ಅವರ ಪತ್ನಿ, ಸಹೋದರ ಮತ್ತು ಮಾವನಿಗೆ ದಿನದ 24 ಗಂಟೆಗಳೂ ಅವರನ್ನು ಭೇಟಿ ಮಾಡಲು ಮುಕ್ತ ಅವಕಾಶ ನೀಡಲಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಆದಾಗ್ಯೂ, ಖಾಸಗಿ ಆಸ್ಪತ್ರೆಗೆ ವರ್ಗಾವಣೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಸರ್ಕಾರ, ಸಫ್ದರ್ಜಂಗ್ ಆಸ್ಪತ್ರೆ ಆಡಳಿತ ಮಂಡಳಿ ಮತ್ತು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ವರದಿ ಸಲ್ಲಿಸುವಂತೆ ಸೂಚಿಸಿದೆ. ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಚೇತನ್ ಶರ್ಮಾ ಅವರು, ಸಫ್ದರ್ಜಂಗ್ ಆಸ್ಪತ್ರೆಯ ವೈದ್ಯರು ವಾಂಗ್‌ಚುಕ್ ಅವರನ್ನು ಉತ್ತಮವಾಗಿ ಉಪಚರಿಸುತ್ತಿದ್ದು, ಚಿಕಿತ್ಸೆಯ ಬಗ್ಗೆ ಸಂದೇಹಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಹದಗೆಡುತ್ತಿರುವುದರಿಂದ ಹೋರಾಟಗಾರರು ವೈದ್ಯರೊಂದಿಗೆ ಸಹಕರಿಸಬೇಕು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, ವಾಂಗ್‌ಚುಕ್ ಯಾವುದೇ ಅಪರಾಧದಡಿಯಲ್ಲಿ ಬಂಧನದಲ್ಲಿಲ್ಲ. ಹೀಗಿರುವಾಗ ಭಾರತದ ಯಾವುದೇ ನಾಗರಿಕನಿಗೆ ಅವರ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಹಕ್ಕನ್ನು ಸರ್ಕಾರ ನಿರಾಕರಿಸಬಹುದೇ? ಎಂದು ಪ್ರಶ್ನಿಸಿ, ಅವರನ್ನು ತಕ್ಷಣವೇ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನೀಡಬೇಕೆಂದು ಬಲವಾಗಿ ವಾದಿಸಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಸೋನಮ್ ವಾಂಗ್ಚುಕ್ ಅವರು ಕಳೆದ 21 ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ದಿನದಿಂದ ದಿನಕ್ಕೆ ಅವರ ದೈಹಿಕ ಶಕ್ತಿ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ, ದೆಹಲಿ ಪೊಲೀಸರು ಶನಿವಾರ ವಾಂಗ್ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು.