image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಷ್ಯಾ ಯುದ್ಧದ ಕರಾಳತೆ: ಉತ್ತರ ಪ್ರದೇಶದಲ್ಲಿ ಶವವಿಲ್ಲದೇ ಯುವಕನ ಅಂತ್ಯಕ್ರಿಯೆ

ರಷ್ಯಾ ಯುದ್ಧದ ಕರಾಳತೆ: ಉತ್ತರ ಪ್ರದೇಶದಲ್ಲಿ ಶವವಿಲ್ಲದೇ ಯುವಕನ ಅಂತ್ಯಕ್ರಿಯೆ

ಅಜಮ್‌ಗ್ರಾಹ್ : ಉತ್ತಮ ಸಂಬಳದ ಆಸೆಗೆ ಬಿದ್ದು ರಷ್ಯಾಕ್ಕೆ ತೆರಳಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ನಾಪತ್ತೆಯಾದ ಯುವಕನೊಬ್ಬನಿಗೆ ಆತನ ಕುಟುಂಬಸ್ಥರು ಶವವಿಲ್ಲದೆಯೇ ಅಂತ್ಯಕ್ರಿಯೆ ನಡೆಸಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಅಜಮ್‌ಗ್ರಾಹ್ ಜಿಲ್ಲೆಯ ಖೋಜಾಪುರ್ ಮಾಧೋಪಟ್ಟಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಯೋಗೇಂದ್ರ ಯಾದವ್ ಎಂಬ ಯುವಕನ ಶವ ಸಿಗದ ಕಾರಣ, ಆತನ ರಷ್ಯಾ ಸೇನಾ ಸಮವಸ್ತ್ರವನ್ನೇ ದಹನ ಮಾಡಿ ವಿಚಿತ್ರ ಹಾಗೂ ಮನಕಲಕುವ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ರಾಜ್ಯದ ನೂರಾರು ಜನರಂತೆ, ಯೋಗೇಂದ್ರ ಕೂಡ ಉತ್ತಮ ಸಂಬಳದ ಕೆಲಸದ ಆಸೆಯೊಂದಿಗೆ ಏಜೆಂಟ್‌ಗಳಾದ ವಿನೋದ್, ಸುಮಿತ್ ಮತ್ತು ದುಷ್ಯಂತ್ ಎಂಬುವವರ ಬಲೆಗೆ ಬಿದ್ದಿದ್ದರು. ಕಾವಲುಗಾರ ಅಥವಾ ಸಹಾಯಕ ಹುದ್ದೆಯ ಭರವಸೆ ನೀಡಿದ್ದರಿಂದ, ಇವರನ್ನು ನಂಬಿ ಯೋಗೇಂದ್ರ 2024ರ ಜನವರಿ 15 ರಂದು ರಷ್ಯಾಕ್ಕೆ ತೆರಳಿದ್ದರು. ಆದರೆ ರಷ್ಯಾ ತಲುಪಿದ ನಂತರ ಕಂಪನಿಯಲ್ಲಿ ಕೆಲಸ ಕೊಡುವ ಬದಲಾಗಿ, ಅವರಿಗೆ ಒಂದು ತಿಂಗಳ ಕಾಲ ಸೈನಿಕ ತರಬೇತಿ ನೀಡಿ, ತಮಗೂ ತಮ್ಮ ದೇಶಕ್ಕೂ ಸಂಬಂಧವಿಲ್ಲದ ರಷ್ಯಾ-ಉಕ್ರೇನ್ ಯುದ್ಧಕ್ಕೆ ಬಲವಂತವಾಗಿ ಸೇರಿಸಲಾಯಿತು.

ಯೋಗೇಂದ್ರ ಅವರ ಸಹೋದರ ಆಶಿಶ್ ಈ ಬಗ್ಗೆ ಮಾಹಿತಿ ನೀಡಿದ್ದು, 2024ರ ಮೇ ತಿಂಗಳಲ್ಲಿ ಕೊನೆಯ ಬಾರಿಗೆ ಸಹೋದರನೊಂದಿಗೆ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಮೇ 9, 2024 ರಂದು ಉಕ್ರೇನ್ ಜೊತೆಗಿನ ಯುದ್ಧದಲ್ಲಿ ಯೋಗೇಂದ್ರ ಗಾಯಗೊಂಡಿದ್ದಾರೆ ಎಂಬ ದೂರವಾಣಿ ಕರೆ ಬಂದ ನಂತರ ಆತನ ಯಾವುದೇ ಸುಳಿವು ಸಿಕ್ಕಿಲ್ಲ. ರಾಯಭಾರ ಕಚೇರಿಯ ಮೂಲಕ ಆತನ ಬಗ್ಗೆ ಮಾಹಿತಿ ಪಡೆಯಲು ಕುಟುಂಬಸ್ಥರು ಸಾಕಷ್ಟು ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಕೇವಲ ಯೋಗೇಂದ್ರ ಮಾತ್ರವಲ್ಲದೆ ಜಿಲ್ಲೆಯ ಇನ್ನೂ ಹಲವಾರು ಯುವಕರು ಹೀಗೆ ರಷ್ಯಾದಲ್ಲಿ ನಾಪತ್ತೆಯಾಗಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳಲು ಇಡೀ ಗ್ರಾಮದ ಜನರು ಹಣ ಸಂಗ್ರಹಿಸಿ ಇಬ್ಬರು ವ್ಯಕ್ತಿಗಳನ್ನು ರಷ್ಯಾಕ್ಕೂ ಕಳುಹಿಸಿ ವಿಚಾರಿಸಿದ್ದರು. ಆದರೆ ಅವರ ಹುಡುಕಾಟವೂ ವಿಫಲವಾಗಿದ್ದರಿಂದ ಆತಂಕ ಹಾಗೂ ತೀವ್ರ ಬೇಸರಗೊಂಡ ಯೋಗೇಂದ್ರ ಕುಟುಂಬಸ್ಥರು ಕೊನೆಗೆ ಶವವಿಲ್ಲದೆಯೇ ಈ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ್ದಾರೆ.

Category
ಕರಾವಳಿ ತರಂಗಿಣಿ