image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಎನ್‌ಸಿಪಿ ಬಣಗಳ ವಿಲೀನಕ್ಕೆ ಬಿಜೆಪಿ ಷರತ್ತು

ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನ: ಎನ್‌ಸಿಪಿ ಬಣಗಳ ವಿಲೀನಕ್ಕೆ ಬಿಜೆಪಿ ಷರತ್ತು

ಮಹಾರಾಷ್ಟ್ರ : ಮಹಾರಾಷ್ಟ್ರ ರಾಜಕೀಯದ ಚದುರಂಗದಾಟ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದ್ದು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವನ್ನು ಸೇರಲಿದೆಯೇ ಎಂಬ ಊಹಾಪೋಹಗಳು ದೇಶಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿವೆ. ಆದರೆ ಈ ಬಗ್ಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಿಗೂಢ ಮೌನ ವಹಿಸಿದ್ದು, ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ. ಈ ಸಮಯದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದು ಸೂಕ್ತವಲ್ಲ ಎಂದು ಮಾರ್ಮಿಕವಾಗಿ ಹೇಳಿ ಜಾರಿಕೊಂಡಿದ್ದಾರೆ.

ತೆರೆಮರೆಯಲ್ಲಿ ನಡೆಯುತ್ತಿರುವ ಈ ರಾಜಕೀಯ ಸಂಧಾನಗಳ ನಡುವೆ ಕೇಂದ್ರ ಆಡಳಿತ ಪಕ್ಷವಾದ ಬಿಜೆಪಿ ಅತ್ಯಂತ ಚಾಣಾಕ್ಷ ಹೆಜ್ಜೆ ಇಟ್ಟಿದೆ. ಶರದ್ ಪವಾರ್ ಬಣವನ್ನು ಪ್ರತ್ಯೇಕವಾಗಿ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿ, ಒಂದು ಷರತ್ತುಬದ್ಧ ಆಫರ್ ಮುಂದಿಟ್ಟಿದೆ. ಸದ್ಯ ಸರ್ಕಾರದ ಭಾಗವಾಗಿರುವ ಸುನೇತ್ರಾ ಪವಾರ್ ಬಣ ಮತ್ತು ಶರದ್ ಪವಾರ್ ಬಣ ಎರಡೂ ಒಂದಾಗಿ ‘ಮಹಾ ವಿಲೀನ’ ಮಾಡಿಕೊಂಡರೆ ಮಾತ್ರ ಎನ್‌ಡಿಎ ಒಳಗೆ ಪ್ರವೇಶ ನೀಡಲಾಗುವುದು ಎಂದು ಬಿಜೆಪಿ ಹಿರಿಯ ನಾಯಕತ್ವ ಸ್ಪಷ್ಟ ಸಂದೇಶ ರವಾನಿಸಿದೆ. ಒಂದು ವೇಳೆ ಎರಡೂ ಬಣಗಳು ಒಂದೇ ಪಕ್ಷವಾಗಿ ವಿಲೀನಗೊಂಡರೆ, ಅಧಿಕಾರ ಸಮತೋಲನಕ್ಕಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಎರಡು ಪ್ರಮುಖ ಸಚಿವ ಸ್ಥಾನಗಳನ್ನು ನೀಡುವುದಾಗಿಯೂ ಬಿಜೆಪಿ ಪ್ರಸ್ತಾಪಿಸಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಇನ್ನೊಂದೆಡೆ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಸೋನಮ್ ವಾಂಗ್ಚುಕ್ ಅವರನ್ನು ಭೇಟಿ ಮಾಡಲು ಬಂದಿದ್ದ ಶರದ್ ಪವಾರ್ ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ಮಾಧ್ಯಮಗಳ ಎದುರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅಜಿತ್ ಪವಾರ್ ನಿಧನರಾದ ದಿನವೇ ನಮ್ಮ ಕೆಲವು ಹಿರಿಯ ನಾಯಕರು ಒಗ್ಗಟ್ಟಿನ ಮಾತು ಆಡಿದ್ದರೂ, ಮರುದಿನವೇ ಸುನೇತ್ರಾ ಪವಾರ್ ಬಣದವರು ಅಂಥದ್ದೇನೂ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದು ನಮಗೆ ತೀವ್ರ ದುಃಖ ತಂದಿದೆ ಎಂದು ಸುಪ್ರಿಯಾ ಸುಳೆ ಬೇಸರ ವ್ಯಕ್ತಪಡಿಸಿದ್ದಾರೆ.

2023 ರಲ್ಲಿ ಶರದ್ ಪವಾರ್ ವಿರುದ್ಧ ಸೋದರಳಿಯ ಅಜಿತ್ ಪವಾರ್ ಬಂಡಾಯವೆದ್ದು, ಬಹುಸಂಖ್ಯಾತ ಶಾಸಕರೊಂದಿಗೆ ಬಿಜೆಪಿ-ಶಿವಸೇನೆ ಸರ್ಕಾರ ಸೇರಿದ್ದರು. ಆಗ ಚುನಾವಣಾ ಆಯೋಗವು ಅಜಿತ್ ಬಣಕ್ಕೆ ಅಧಿಕೃತ ‘ಗಡಿಯಾರ’ ಚಿಹ್ನೆ ನೀಡಿತ್ತು ಹಾಗೂ ಶರದ್ ಪವಾರ್ ಬಣ ‘ಎನ್‌ಸಿಪಿ-ಶರದ್ಚಂದ್ರ ಪವಾರ್’ ಹೆಸರಿನಲ್ಲಿ ಉಳಿದುಕೊಂಡಿತ್ತು. ಇತ್ತೀಚೆಗೆ ಹೆಲಿಕಾಪ್ಟರ್ ಅವಘಡದಲ್ಲಿ ಅಜಿತ್ ಪವಾರ್ ಹಠಾತ್ ನಿಧನರಾದ ನಂತರ ಪಕ್ಷದ ನಾಯಕತ್ವ ಅವರ ಪತ್ನಿ ಸುನೇತ್ರಾ ಪವಾರ್ ಕೈ ಸೇರಿದೆ. ಅಜಿತ್ ಪವಾರ್ ಬದುಕಿದ್ದಾಗಲೇ ಚಿಕ್ಕಪ್ಪ-ಸೋದರಳಿಯ ಮತ್ತೆ ಒಂದಾಗಲು ಪುಣೆ ಮುನ್ಸಿಪಲ್ ಚುನಾವಣೆಯಲ್ಲಿ ರಹಸ್ಯ ಮೈತ್ರಿ ಮಾಡಿಕೊಂಡಿದ್ದರು ಮತ್ತು ಮಾತುಕತೆ ಬಹುದೂರ ಸಾಗಿತ್ತು. ಆದರೆ, ಅಜಿತ್ ದಾದಾ ಅವರ ನಿಧನ ಇಡೀ ರಾಜಕೀಯ ಸಮೀಕರಣವನ್ನು ಬದಲಿಸಿದ್ದು, ಸದ್ಯಕ್ಕೆ ಮಹಾರಾಷ್ಟ್ರ ರಾಜಕೀಯದ ಭವಿಷ್ಯ ಅನಿಶ್ಚಿತತೆಯಲ್ಲೇ ಮುಂದುವರೆದಿದೆ.

Category
ಕರಾವಳಿ ತರಂಗಿಣಿ